ಬೆಂಗಳೂರು: ಸಿದ್ದರಾಮಯ್ಯ ಅವರ ರಾಜೀನಾಮೆಯ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಂತ್ರಿ ಪಟ್ಟಿ ರಚನೆಯ ಚರ್ಚೆಯು ತೀವ್ರಗೊಂಡಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಹಿನ್ನೆಲೆಯಲ್ಲಿ ಗ್ಯಾರಂಟಿ ನ್ಯೂಸ್‌ಗೆ ದೊರೆತ ವಿಶೇಷ ಮಾಹಿತಿ ಪ್ರಕಾರ, ದೆಹಲಿಯಲ್ಲಿ ನಡೆದ ಹೈಕಮಾಂಡ್ ಮೀಟಿಂಗ್‌ನಲ್ಲಿ ಮಂತ್ರಿ ಮತ್ತು ಡಿಸಿಎಂ ಪಟ್ಟಿಯ ಬಗ್ಗೆ ಗಂಭೀರ ಚರ್ಚೆ ನಡೆದಿದೆ.
ಡಿ.ಕೆ.ಶಿ ಸರ್ಕಾರದಲ್ಲಿ ಎಷ್ಟು ಡಿಸಿಎಂಗಳು ಇರುತ್ತಾರೆ ಎಂಬುದು ಇನ್ನೂ ಅಂತಿಮಗೊಳ್ಳದಿದ್ದರೂ, 3 ಡಿಸಿಎಂಗಳು ಇರುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಸಂಭವನೀಯ ಡಿಸಿಎಂ ಅಭ್ಯರ್ಥಿಗಳು
- ಡಾ. ಜಿ. ಪರಮೇಶ್ವರ್: ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಚಿವ. ದಲಿತ ಸಮುದಾಯದ ಪ್ರಬಲ ನಾಯಕ. ಡಿ.ಕೆ.ಶಿ ಬಣ ಅಥವಾ ಸಿದ್ದು ಬಣ ಯಾವುದರಲ್ಲೂ ಇಲ್ಲದೆ ಹೈಕಮಾಂಡ್‌ಗೆ ಅತ್ಯಂತ ನಂಬಿಕೆಯ ನಾಯಕರಾಗಿದ್ದಾರೆ. ವಿವಾದಗಳಿಂದ ದೂರವಿರುವ ಅವರು ಕೆಪಿಸಿಸಿ ಅಧ್ಯಕ್ಷ, ಸಚಿವ ಮತ್ತು ಡಿಸಿಎಂ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮುಖ್ಯಮಂತ್ರಿ ಸ್ಪರ್ಧೆಯಲ್ಲೂ ಇದ್ದ ಅವರನ್ನು ಡಿಸಿಎಂ ರೇಸ್‌ನಲ್ಲಿ ಮತ್ತೆ ಕಣಕ್ಕಿಳಿದಿದ್ದಾರೆ.
- ಎಂ.ಬಿ. ಪಾಟೀಲ್: ಮಾಜಿ ಕೈಗಾರಿಕೆ ಸಚಿವ ಮತ್ತು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ. ಸಿದ್ದರಾಮಯ್ಯ ಬಣಕ್ಕೆ ನಿಕಟವಾಗಿದ್ದರೂ ಹೈಕಮಾಂಡ್‌ಗೆ ಬಂಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2023ರ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಅವರು ಸಿಎಂ ರೇಸ್‌ನಲ್ಲೂ ಚರ್ಚೆಯಲ್ಲಿದ್ದರು. ಉದ್ಯಮ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಅನುಭವಿ ಎಂ.ಬಿ. ಪಾಟೀಲ್ ಅವರಿಗೆ ಡಿಸಿಎಂ ಸ್ಥಾನ ಸಿಗುವ ಸಾಧ್ಯತೆ ಇದೆ.
- ಯು.ಟಿ. ಖಾದರ್ ವಿಧಾನಸಭೆ ಸ್ಪೀಕರ್ ಮತ್ತು ಮುಸ್ಲಿಂ ಸಮುದಾಯದ ಪ್ರಬಲ ನಾಯಕ. ಹೈಕಮಾಂಡ್‌ಗೆ ಅತ್ಯಂತ ನಿಷ್ಠಾವಂತರಾದ ಅವರು ಯಾವುದೇ ಬಣಕ್ಕೂ ಸೇರದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರಾವಳಿ ಕ್ಷೇತ್ರದಲ್ಲಿ ಬಿಜೆಪಿಯ ಹಿಂದುತ್ವ ರಾಜಕೀಯದ ನಡುವೆಯೂ ಅವರು ಸತತ ಗೆಲುವು ಸಾಧಿಸಿದ್ದಾರೆ. ಸ್ಪೀಕರ್ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ ಅವರನ್ನು ಡಿಸಿಎಂ ಆಗಿ ಮುಂದಿಡುವ ಚರ್ಚೆ ತೀವ್ರವಾಗಿದೆ.
ಹೈಕಮಾಂಡ್, ಸಿದ್ದು ಮತ್ತು ಡಿ.ಕೆ ಪಟ್ಟಿ
ದೆಹಲಿ ಮೀಟಿಂಗ್‌ನಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಪಟ್ಟಿಗಳನ್ನು ಪರಿಶೀಲಿಸಿದೆ ಎಂದು ತಿಳಿದುಬಂದಿದೆ. ಸಿದ್ದು ಬಣದಿಂದ ಹಲವು ಹೆಸರುಗಳು ಮತ್ತು ಡಿ.ಕೆ.ಶಿ ಬಣದಿಂದ ತನ್ನ ಆಪ್ತರನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಸಮುದಾಯ ಸಮತೋಲನ, ಪ್ರಾದೇಶಿಕ ಪ್ರತಿನಿಧ್ಯ ಮತ್ತು ಹೈಕಮಾಂಡ್‌ನ ವಿಶ್ವಾಸಾರ್ಹ ನಾಯಕರನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಪಟ್ಟಿ ರಚನೆಯಾಗುವ ಸಾಧ್ಯತೆ ಇದೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮಂತ್ರಿ ಮಂಡಲದಲ್ಲಿ ಸಮರ್ಥ ಮತ್ತು ವಿವಾದರಹಿತ ನಾಯಕರನ್ನು ಆಯ್ಕೆ ಮಾಡುವುದಾಗಿ ಹೈಕಮಾಂಡ್ ಸೂಚಿಸಿದೆ.
ಈ ಬದಲಾವಣೆಯು ಕರ್ನಾಟಕ ರಾಜಕೀಯಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ. ಗ್ಯಾರಂಟಿ ನ್ಯೂಸ್‌ನ ಈ ಎಕ್ಸ್‌ಕ್ಲೂಸಿವ್ ಮಾಹಿತಿಯಿಂದ ಈ ಸುದ್ದಿ ಲಭ್ಯವಾಗಿದೆ
