ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬೆಂಗಾವಲು ವಾಹನ ಡ್ರೈವರ್ ಆತ್ಮಹ*ತ್ಯೆ

Untitled design 2025 10 09t112945.914

ಬೆಂಗಳೂರು, ಅಕ್ಟೋಬರ್ 08, 2025: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಬೆಂಗಾವಲು ವಾಹನದ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಪೂಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಶರಣಗೌಡ ರಾಮಗೋಳ (33) ನೇಣಿಗೆ ಶರಣಾಗಿದ್ದಾನೆ.

ಅಕ್ಟೋಬರ್ 08 ರಂದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಶರಣಗೌಡ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶರಣಗೌಡ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದು, ಅವರ ಪತ್ನಿ ಶೈಲಶ್ರೀ ಮಾಗಡಿ ಸಂಚಾರ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಶರಣಗೌಡ ಆರ್. ಅಶೋಕ್ ಅವರ ಬೆಂಗಾವಲು ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಈ ದುರಂತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಶರಣಗೌಡ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯ ಬಗ್ಗೆ ತಿಳಿದ ತಕ್ಷಣ ಆರ್. ಅಶೋಕ್ ಆಸ್ಪತ್ರೆಗೆ ಧಾವಿಸಿದ್ದಾರೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಆತ್ಮಹತ್ಯೆಗೆ ಕಾರಣ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಡೆತ್ ನೋಟ್ ಅಥವಾ ಯಾವುದೇ ಸುಳಿವು ಸಿಕ್ಕಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಆರ್. ಅಶೋಕ್‌ ಪ್ರತಿಕ್ರಿಯೆ

ಈ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, ಶರಣಗೌಡನನ್ನು ಸೌಮ್ಯ ಮತ್ತು ಮೌನಿ ವ್ಯಕ್ತಿಯೆಂದು ಬಣ್ಣಿಸಿದರು. “ಈ ವಿಷಯ ಈಗ ತಿಳಿಯಿತು. ನಾನು ಎರಡು ದಿನಗಳಿಂದ ಊರಿನಲ್ಲಿ ಇರಲಿಲ್ಲ. ತಿಳಿದ ಕೂಡಲೇ ಇಲ್ಲಿಗೆ ಬಂದೆ. ಶರಣಗೌಡ ಕಳೆದ ಎರಡು ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡುತ್ತಿದ್ದರು. ತುಂಬಾ ಸೌಮ್ಯ ವ್ಯಕ್ತಿ, ಮಾತು ಕಡಿಮೆ. ತನ್ನ ಕೆಲಸ ಆಯ್ತು, ತಾನಾಯ್ತು ಎಂಬಂತೆ ಇದ್ದವರು,” ಎಂದು ಅವರು ಬೇಸರದಿಂದ ಹೇಳಿದರು.

ಅಶೋಕ್ ಮಾತನಾಡುವಾಗ ಶರಣಗೌಡನ ಕುಟುಂಬದ ಆರ್ಥಿಕ ಸ್ಥಿತಿಯ ಬಗ್ಗೆಯೂ ಉಲ್ಲೇಖಿಸಿದರು. “ಅವರ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು. ಹಣಕಾಸಿನ ಸಮಸ್ಯೆ ಇರಲಿಲ್ಲ. ಈ ನವರಾತ್ರಿ ಹಬ್ಬಕ್ಕೆ ನಾನು ಸಿಹಿತಿಂಡಿ ಮತ್ತು ಬಟ್ಟೆಗಳನ್ನು ಕೊಟ್ಟಿದ್ದೆ. ಆಗ ಅವರು ದಿಢೀರ್ ಆಗಿ ನನಗೆ ನಮಸ್ಕಾರ ಮಾಡಿದ್ದರು. ಸಾಮಾನ್ಯವಾಗಿ ಪೊಲೀಸರು ಯಾರ ಕಾಲಿಗೂ ಬೀಳುವುದಿಲ್ಲ, ಆದರೆ ಆ ದಿನ ಅವರು ನನಗೆ ನಮಸ್ಕಾರ ಮಾಡಿದ್ದರು. ಅಂತಹ ಒಳ್ಳೆಯ ವ್ಯಕ್ತಿಯನ್ನು ಇಂದು ಕಳೆದುಕೊಂಡಿದ್ದೇವೆ,” ಎಂದು ದುಃಖ ವ್ಯಕ್ತಪಡಿಸಿದರು.

ಶರಣಗೌಡ ಆ ದಿನ ಡ್ಯೂಟಿಗೆ ಬರುವುದಿಲ್ಲ, ಮಂತ್ರಾಲಯಕ್ಕೆ ಹೋಗುವುದಾಗಿ ತಿಳಿಸಿದ್ದರಂತೆ. ಆದರೆ, ಅವರ ಈ ನಿರ್ಧಾರದ ಹಿಂದಿನ ಕಾರಣ ಯಾರಿಗೂ ತಿಳಿದಿಲ್ಲ. “ಡಿಸಿಪಿಯವರ ಜೊತೆ ಮಾತನಾಡಿದ್ದೇನೆ. ಡೆತ್ ನೋಟ್ ಏನಾದರೂ ಸಿಕ್ಕಿದೆಯೇ ಎಂದು ಪರಿಶೀಲಿಸಬೇಕು,” ಎಂದು ಅಶೋಕ್ ಹೇಳಿದರು.

Exit mobile version