ನಾಳೆಯಿಂದ ಟ್ಯಾಕ್ಸಿ, ಲಘು ಗೂಡ್ಸ್ ವಾಹನ ಮಾಲೀಕರಿಗೆ ತೆರಿಗೆ ಶಾಕ್!

Untitled design 2025 04 30t164628.450
ADVERTISEMENT
ADVERTISEMENT

ಮೇ 1ರಿಂದ ರಾಜ್ಯದ ವಾಹನ ಖರೀದಿದಾರರಿಗೆ ತೆರಿಗೆ ಶಾಕ್ ಎದುರಾಗಲಿದೆ. ಹೊಸ ವಾಹನಗಳ ಖರೀದಿಗೆ ಸರ್ಕಾರವು ಜಾರಿ ಮಾಡುತ್ತಿರುವ ನೂತನ ವಾಹನ ತೆರಿಗೆ ನೀತಿ ಅನ್ವಯವಾಗಲಿದ್ದು, ಇದರಿಂದ ಟ್ಯಾಕ್ಸಿ ಹಾಗೂ ಲಘು ಗೂಡ್ಸ್ ವಾಹನಗಳ ಖರೀದಿ ದುಬಾರಿಯಾಗಲಿದೆ. ಕರ್ನಾಟಕ ಸರ್ಕಾರ ತಿದ್ದುಪಡಿ ಮಾಡಿದ “ಕರ್ನಾಟಕ ಮೋಟಾರು ವಾಹನಗಳ ತೆರಿಗೆ ವಿಧೇಯಕ”ಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಅದು ನಾಳೆಯಿಂದಲೇ (ಮೇ 1) ಜಾರಿಗೆ ಬರಲಿದೆ.

ಈ ತಿದ್ದುಪಡಿಯೊಂದಿಗೆ 10 ಲಕ್ಷ ರೂಪಾಯಿಯೊಳಗಿನ ಮೌಲ್ಯದ ಟ್ಯಾಕ್ಸಿ ಮತ್ತು ಲಘು ಗೂಡ್ಸ್ ವಾಹನಗಳ ಮೇಲೆ ಶೇಕಡಾ 5ರಷ್ಟು ಜೀವಿತಾವಧಿ (Lifetime) ತೆರಿಗೆ ವಿಧಿಸಲಾಗುತ್ತಿದೆ. ಇದುವರೆಗೆ ಈ ಶ್ರೇಣಿಯ ವಾಹನಗಳ ಮಾಲೀಕರು ಪ್ರತಿ ಮೂರು ತಿಂಗಳಿಗೊಮ್ಮೆ ಸೀಟ್‌ಗೆ 100 ರೂಪಾಯಿ ಪಾವತಿಸುತ್ತಿದ್ದರು. ಉದಾಹರಣೆಗೆ, ನಾಲ್ಕು ಸೀಟ್ ಇರುವ ಟ್ಯಾಕ್ಸಿಗೆ 400 ರೂಪಾಯಿ ತ್ರೈಮಾಸಿಕ ತೆರಿಗೆ ಆಗುತ್ತಿತ್ತು. ಆದರೆ ಇನ್ನು ಮುಂದೆ ಆ ವ್ಯವಸ್ಥೆ ಸ್ಥಗಿತಗೊಂಡು, ನೇರವಾಗಿ ಶೇ. 5ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗುತ್ತಿದೆ.

ಇದಾದ ಮೂಲಕ, 10 ಲಕ್ಷ ರೂ. ಮೌಲ್ಯದ ಯೆಲ್ಲೋ ಬೋರ್ಡ್ ಕಾರು ಖರೀದಿ ಮಾಡಿದ ವ್ಯಕ್ತಿಯು ₹50,000 ಜೀವಿತಾವಧಿ ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ಯೆಲ್ಲೋ ಬೋರ್ಡ್ ವಾಹನ ಖರೀದಿಸುವವರು ಹೊಸ ಆರ್ಥಿಕ ಭಾರವನ್ನು ಸಹಿಸಬೇಕಾಗಿದೆ.

ಮತ್ತೊಂದೆಡೆ, 25 ಲಕ್ಷಕ್ಕೂ ಅಧಿಕ ಮೌಲ್ಯದ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 10ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗಿದೆ. ಈವರೆಗೆ ಇಂತಹ ವಾಹನಗಳಿಗೆ ಯಾವುದೇ ತೆರಿಗೆ ಇಲ್ಲದಿದ್ದರೂ, ಈಗ ಹೊಸ ನೀತಿಯಂತೆ ₹25 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಕಾರಿಗೆ ₹2.5 ಲಕ್ಷ ತೆರಿಗೆ ಪಾವತಿ ಮಾಡಬೇಕಾಗಿದೆ.

ಹಳೆಯ ವ್ಯವಸ್ಥೆಯಲ್ಲಿ, ಕಟ್ಟಡ ಸಾಮಾಗ್ರಿಗಳ ಸಾಗಾಣಿಕೆಗೆ ಬಳಸುವ ಲಘು ಗೂಡ್ಸ್ ವಾಹನಗಳಿಗೆ ಶೇಕಡಾ 6ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ನೂತನ ತಿದ್ದುಪಡಿಯೊಂದಿಗೆ ಅದನ್ನೂ ಶೇಕಡಾ 8ಕ್ಕೆ ಏರಿಸಲಾಗಿದೆ. ಇದು ಕಟ್ಟಡ ಉದ್ಯಮಕ್ಕೂ ಖರ್ಚು ಹೆಚ್ಚಾಗುವ ಸಾಧ್ಯತೆ ಉಂಟುಮಾಡಿದೆ.

Exit mobile version