ಕರ್ನಾಟಕದಲ್ಲಿ ಮುಂಗಾರು ಮಳೆಯ ವೇಗ ಸದ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಮಳೆ ದುರ್ಬಲಗೊಂಡಿದೆ. ಆದರೂ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆyನ್ನು IMD ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈ ಭಾಗಗಳಲ್ಲಿ ಮಳೆಯೊಂದಿಗೆ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರದ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ಅಂದಾಜಿಸಲಾಗಿದೆ.
ಮಲೆನಾಡು ಭಾಗಗಳಾದ ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಘಾಟ್ ಪ್ರದೇಶಗಳಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲೂ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯುವ ಮುನ್ನ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಸದ್ಯ ದುರ್ಬಲವಾಗಿದ್ದು, ಕಲಬುರಗಿ, ಬೆಳಗಾವಿ, ಬೀದರ್, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯ ಸಾಧ್ಯತೆ ಇಲ್ಲ. ಕೆಲವು ಕಡೆಗಳಲ್ಲಿ ಮಾತ್ರ ತುಂತುರು ಮಳೆಯಾಗಬಹುದು. ಈ ಭಾಗಗಳಲ್ಲಿ ಗರಿಷ್ಠ ತಾಪಮಾನ 33ರಿಂದ 35 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುವ ಸಾಧ್ಯತೆ ಇದೆ. ಅಂತೆಯೇ ಇಂದು ರಾಜ್ಯದಲ್ಲಿ ಗರಿಷ್ಠ ತಾಪಮಾನ 33°C ಹಾಗೂ ಕನಿಷ್ಠ ತಾಪಮಾನ 23°C ಆಸುಪಾಸಿನಲ್ಲಿ ಇರಲಿದೆ.
ಮುಂದಿನ ವಾರ ಜೂನ್ 22ರ ನಂತರ ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಳ್ಳಲಿದ್ದು, ವಿಶೇಷವಾಗಿ ಕರಾವಳಿ ಕರ್ನಾಟಕ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
