ಬೆಂಗಳೂರು, ಜುಲೈ 14: ಕರ್ನಾಟಕದ ಮುಂಗಾರು ಅಧಿವೇಶನಕ್ಕೆ (Monsoon Session) ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಆಗಸ್ಟ್ 6 ರಿಂದ ಆರಂಭವಾಗಲಿದೆ. ಇದಕ್ಕೂ ಮೊದಲು ಸಚಿವ ಸಂಪುಟ ವಿಸ್ತರಣೆ (Cabinet Expansion) ಆಗುವ ಸಾಧ್ಯತೆಯಿದೆ.
ಸಿಎಂ ಡಿಕೆ ಶಿವಕುಮಾರ್ ಮಾಹಿತಿ
“ಆಗಸ್ಟ್ 6 ರಿಂದ ಮುಂಗಾರು ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದರು. ಅಧಿವೇಶನವು ಸಾಮಾನ್ಯವಾಗಿ ಜುಲೈನಲ್ಲಿ ನಡೆಯಬೇಕಿತ್ತು. ಆದರೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Integrated Revision – SIR) ಪ್ರಕ್ರಿಯೆ ಹಿನ್ನೆಲೆ ಮುಂದೂಡಲಾಗಿತ್ತು. ಅದೆಲ್ಲವೂ ಮುಗಿದ ಬಳಿಕ ಅಂದರೆ ಆಗಸ್ಟ್ 6 ರಿಂದ ಅಧಿವೇಶನ ಶುರುವಾಗಲಿದೆ ಎಂದು ಅವರು ವಿವರಿಸಿದರು.
ಕಳೆದ ಸಂಪುಟದಲ್ಲಿ ನಿರ್ಧಾರ
ಕಳೆದ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನ ದಿನಾಂಕ ನಿಗದಿಪಡಿಸಲು ಸಚಿವರೆಲ್ಲರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿವೇಚನೆಗೆ ಬಿಟ್ಟಿದ್ದರು. ಅದರಂತೆ ಸಿಎಂ ಈಗ ದಿನಾಂಕವನ್ನು ಅಂತಿಮಗೊಳಿಸಿ ಪ್ರಕಟಿಸಿದ್ದಾರೆ. ಎಷ್ಟು ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂಬುದರ ಬಗ್ಗೆ ಅವರು ಇನ್ನೂ ಮಾಹಿತಿ ನೀಡಿಲ್ಲ. ವಿಧಾನಸೌಧದಲ್ಲಿ ಅಥವಾ ಸುವರ್ಣ ಸೌಧದಲ್ಲಿ (ಬೆಳಗಾವಿ) ನಡೆಸುವ ಬಗ್ಗೆಯೂ ಅಂತಿಮ ತೀರ್ಮಾನವಾಗಿಲ್ಲ.
ಸಂಪುಟ ವಿಸ್ತರಣೆಗೆ ಮುಹೂರ್ತ?
ಅಧಿವೇಶನ ದಿನಾಂಕ ಅಂತಿಮಗೊಂಡಿದ್ದರೂ, ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ನಿಗದಿಯಾಗಿಲ್ಲ . ಆದರೆ, ಆಗಸ್ಟ್ 6 ಕ್ಕೂ ಮುಂಚಿತವಾಗಿ ಈ ಪ್ರಕ್ರಿಯೆಯೂ ಪೂರ್ಣಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ . ಯಾಕೆಂದರೆ, ಸದ್ಯಕ್ಕೆ ಸಿಎಂ ಮತ್ತು ಡಿಸಿಎಂ ಸೇರಿಯೇ 14 ಜನರ ಸಂಪುಟವಿದೆ . ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ಉಳಿದೆಲ್ಲ ಇಲಾಖೆಗಳ ಕುರಿತು ಪ್ರಶ್ನೆಗಳನ್ನು ಕೇಳಲಿವೆ. ಅವುಗಳಿಗೆ ಉತ್ತರಿಸಲು ಆಯಾ ಇಲಾಖೆಗಳ ಸಚಿವರು ಅಗತ್ಯವಿದೆ. ಸಚಿವರಿಲ್ಲದಿದ್ದರೆ ಸಿಎಂ ಸ್ವತಃ ಉತ್ತರ ನೀಡಬೇಕಾಗುತ್ತದೆ .
ಸಂಪುಟ ವಿಸ್ತರಣೆಯ ಲೆಕ್ಕಾಚಾರ
ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡಿದರೆ, ಆಯಾ ಇಲಾಖೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಹೊಸ ಸಚಿವರಿಗೆ ಸಮಯ ಸಿಗುತ್ತದೆ. ಈ ಎಲ್ಲ ಲೆಕ್ಕಾಚಾರಗಳನ್ನು ಇಟ್ಟುಕೊಂಡು, ಸಿಎಂ ಡಿ.ಕೆ. ಶಿವಕುಮಾರ್ ಅವರು ಸಂಪುಟ ವಿಸ್ತರಣೆಗೆ ಕೈಹಾಕುವ ಸಾಧ್ಯತೆಯಿದೆ. ಅಧಿವೇಶನ ಆರಂಭಕ್ಕೂ ಮುನ್ನ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
