ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಹೊಳೆನರಸಿಪುರ ಮೂಲದ ಮಹಿಳೆಯೊಬ್ಬರು ದಾಖಲಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ನ್ಯಾಯಾಲಯ (ಎಸಿಜೆಎಂ) ಕೈಬಿಟ್ಟಿದೆ. ಪ್ರಕರಣವನ್ನು ತಡವಾಗಿ ದಾಖಲಿಸಲಾಗಿದೆ ಎಂಬ ಕಾರಣ ನೀಡಿ, ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದೆ.
ಹೆಚ್.ಡಿ.ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354A ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸೆಕ್ಷನ್ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದೆ. ಆದರೆ ಪ್ರಕರಣ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ಕಾನೂನು ಪ್ರಕಾರ ಈ ವಿಳಂಬಕ್ಕೆ ಸಮರ್ಪಕ ಕಾರಣವನ್ನು ನೀಡಲಾಗಿಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಕೆ.ಎಂ.ಶಿವಕುಮಾರ್ ಆದೇಶಿಸಿದ್ದಾರೆ.
ಹೊಳೆನರಸಿಪುರ ಮೂಲದ ಮಹಿಳೆಯೊಬ್ಬರು, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ಈ ದೂರು ಆಧಾರದಲ್ಲಿ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲವು ತಿಂಗಳುಗಳಿಂದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು. ಆದರೆ ಕೋರ್ಟ್ ಇದೀಗ ಈ ಪ್ರಕರಣವನ್ನು ಕೈಬಿಟ್ಟಿರುವುದರಿಂದ ರೇವಣ್ಣ ಅವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ..
ನ್ಯಾಯಾಲಯದ ಮುಂದೆ ರೇವಣ್ಣ ಪರ ವಕೀಲರು, ದೂರು ದಾಖಲಿಸಲು ಅನಗತ್ಯ ವಿಳಂಬವಾಗಿದ್ದು, ಇದು ಕಾನೂನಿನ ದುರುಪಯೋಗವಾಗಿದೆ ಎಂದು ವಾದ ಮಂಡಿಸಿದ್ದರು. ಆರೋಪಿತ ಘಟನೆ ನಡೆದ ದಿನಾಂಕ ಮತ್ತು ದೂರು ದಾಖಲಿಸಿದ ದಿನಾಂಕದ ಮಧ್ಯೆ ದೀರ್ಘ ಕಾಲಾವಧಿ ಇದ್ದು, ಈ ಅವಧಿಯಲ್ಲಿ ಯಾವುದೇ ಸ್ಪಷ್ಟ ಕಾರಣ ಅಥವಾ ದಾಖಲೆಗಳನ್ನು ನೀಡಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ವಾದಗಳನ್ನು ಪರಿಗಣಿಸಿದ ಕೋರ್ಟ್, ಪ್ರಕರಣವನ್ನು ವಜಾಗೊಳಿಸುವ ತೀರ್ಪು ನೀಡಿದೆ.
