ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟ ಕುಟುಂಬಗಳಿಗೆ ₹5 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ

Untitled design (82)

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ ರೂ. 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಗುರುವಾರ ವಿಧಾನ ಪರಿಷತ್ತಿನಲ್ಲಿ  ಸದಸ್ಯ ಸಿ.ಎನ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಈ ಮಹತ್ವದ ನಿರ್ಧಾರವನ್ನು ತಿಳಿಸಿದರು.

ಸದಸ್ಯ ಸಿ.ಎನ್. ಮಂಜೇಗೌಡ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸರ್ಕಾರದ ಕಾಯ್ದೆಯ ಉದ್ದೇಶ ವಿಫಲವಾಗುತ್ತಿದೆ ಎಂದು ಟೀಕಿಸಿದರು. ಈಗಾಗಲೇ ಜಾರಿಯಲ್ಲಿರುವ ಕರ್ನಾಟಕ ಕಿರು ಸಾಲ ಮತ್ತು ಸಣ್ಣ (ಬಲವಂತದ ಕ್ರಮಗಳ ಪ್ರತಿಬಂಧಕ) ಕಾಯ್ದೆ 2025ರ ಪರಿಣಾಮವನ್ನು ಪರಿಶೀಲಿಸಬೇಕೆಂದು ಕೋರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ, 2025ರ ಫೆಬ್ರವರಿಯಲ್ಲಿ ಜಾರಿಗೆ ಬಂದ ಕರ್ನಾಟಕ ಕಿರು ಸಾಲ ಕಾಯ್ದೆಯಿಂದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ ಎಂದು ಸ್ಪಷ್ಟಪಡಿಸಿದರು. “ಕಾಯ್ದೆ ಜಾರಿಯಾದ ಬಳಿಕ, ಜನವರಿಯಲ್ಲಿ 21 ಪ್ರಕರಣಗಳು ಮತ್ತು 4 ಆತ್ಮಹತ್ಯೆಗಳು, ಫೆಬ್ರವರಿಯಲ್ಲಿ 44 ಪ್ರಕರಣಗಳು ಮತ್ತು 10 ಆತ್ಮಹತ್ಯೆಗಳು, ಮಾರ್ಚ್‌ನಲ್ಲಿ 22 ಪ್ರಕರಣಗಳು ಮತ್ತು 2 ಆತ್ಮಹತ್ಯೆಗಳು, ಏಪ್ರಿಲ್‌ನಲ್ಲಿ 10 ಪ್ರಕರಣಗಳು, ಜೂನ್‌ನಲ್ಲಿ 1 ಪ್ರಕರಣ ಮತ್ತು 1 ಆತ್ಮಹತ್ಯೆ, ಜುಲೈನಲ್ಲಿ 5 ಪ್ರಕರಣಗಳು ಮತ್ತು 1 ಆತ್ಮಹತ್ಯೆ ದಾಖಲಾಗಿವೆ. ಈ ಅಂಕಿಅಂಶಗಳಿಂದ ಕಾಯ್ದೆಯಿಂದ ಒಟ್ಟಾರೆ ಪರಿಣಾಮ ಉಂಟಾಗಿದೆ ಎಂದು ಕಾಣುತ್ತದೆ,” ಎಂದು ಅವರು ವಿವರಿಸಿದರು.

ಆದರೆ, ಕಾಯ್ದೆಯ ಅನುಷ್ಠಾನದಲ್ಲಿ ಕೆಲವು ದೋಷಗಳಿರಬಹುದು ಎಂದು ಒಪ್ಪಿಕೊಂಡ ಅವರು, ಕಾನೂನೇ ವಿಫಲವಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. “ಕಾಯ್ದೆಯಡಿ ಸಾಲಗಾರರಿಗೆ ಕಿರುಕುಳವಾಗದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಪೊಲೀಸ್ ಬೀಟ್ ವ್ಯಾಪ್ತಿಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ನಿಗಾ ಇಡಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜೊತೆಗೆ, ಸಂಸ್ಥೆಗಳ ಮುಖ್ಯಸ್ಥರಿಗೆ ಕಿರುಕುಳ ತಡೆಗೆ ಸೂಚನೆಗಳನ್ನು ನೀಡಲಾಗಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪರಿಹಾರ ಯೋಜನೆಯ ಕುರಿತು ಮಾತನಾಡಿದ ಸಿದ್ದರಾಮಯ್ಯ, “ಈವರೆಗೆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆಗೆ ಒಳಗಾದವರ ಕುಟುಂಬಗಳಿಗೆ ಪರಿಹಾರ ನೀಡುವ ಯಾವುದೇ ಯೋಜನೆ ಇರಲಿಲ್ಲ. ಆದರೆ, ರೈತರ ಕುಟುಂಬಗಳಿಗೆ ಸಾಲದಿಂದ ಆತ್ಮಹತ್ಯೆಗೆ ಒಳಗಾದವರಿಗೆ ನೀಡುವಂತೆ, ಇನ್ನು ಮುಂದೆ ಮೈಕ್ರೋ ಫೈನಾನ್ಸ್ ಸಾಲದಿಂದ ಆತ್ಮಹತ್ಯೆಗೆ ಒಳಗಾದವರ ಕುಟುಂಬಗಳಿಗೂ ₹5 ಲಕ್ಷ ನೀಡಲಾಗುವುದು,” ಎಂದರು.

Exit mobile version