ಬೆಂಗಳೂರು: ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ವರುಣದೇವನ ಅಬ್ಬರ ಮುಂದುವರಿಯಲಿದೆ. ಭಾರತೀಯ ಹವಾಮಾನ ವಿಜ್ಞಾನ ಇಲಾಖೆಯು (ಐಎಂಡಿ) ನೀಡಿರುವ ಅಂದಾಜಿನ ಪ್ರಕಾರ, ಕರಾವಳಿ ಮತ್ತು ಮಲೆನಾಡು ಪ್ರದೇಶದ ಕೆಲವು ತಾಲೂಕುಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಇದರ ನಡುವೆ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆ ಇದೆ.
ರಾಜ್ಯವನ್ನು ಮೂರು ಪ್ರಮುಖ ಹವಾಮಾನ ವಲಯಗಳಾಗಿ ವಿಂಗಡಿಸಿ ಹವಮಾನ ವರದಿ ನೀಡಲಾಗಿದೆ.
-
ದಕ್ಷಿಣ ಒಳನಾಡು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯನ್ನು ನಿರೀಕ್ಷಿಸಲಾಗಿದೆ. ಈ ಪ್ರದೇಶಗಳಲ್ಲಿ ಶೇಕಡಾ 50-75 ರಷ್ಟು ಮಳೆಯ ಸಾಧ್ಯತೆ ಇದೆ.
-
ಕರಾವಳಿ ಮತ್ತು ಮಲೆನಾಡು: ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಕರೆವ ಮಳೆಯಾಗಲಿದೆ. ಇಲ್ಲಿ ಭಾರೀ ಮಳೆಗೆ ಎಚ್ಚರಿಕೆ ವಹಿಸಲಾಗಿದೆ. ವಿಶೇಷವಾಗಿ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕುಂದಾಪುರ ಮತ್ತು ಕಾರ್ಕಳದಂಥ ಪ್ರದೇಶಗಳಲ್ಲಿ ಮಳೆ ಹೆಚ್ಚಿರುವ ನಿರೀಕ್ಷೆ ಇದೆ. ಹವಾಮಾನ ವೈಪರೀತ್ಯ ಮತ್ತು ಗರಿಷ್ಠ ಗಾಳಿಯ ವೇಗದ ಕಾರಣ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಲಾಗಿದೆ.
-
ಉತ್ತರ ಒಳನಾಡು: ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆ ಅಥವಾ ಮೋಡ ಕವಿದ ವಾತಾವರಣ ಇರಲಿದೆ. ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ತುಲನಾತ್ಮಕವಾಗಿ ಕಡಿಮೆ ಇರಬಹುದು.
#ಕರ್ನಾಟಕ ರಾಜ್ಯದ ಮುಂದಿನ 5 ದಿನಗಳ #ಮಳೆ #ಮುನ್ಸೂಚನೆ ನಕ್ಷೆಗಳು, ಜಿಲ್ಲಾವಾರು ಎಚ್ಚರಿಕೆಗಳೊಂದಿಗೆ. ಮೂಲ: ಐಎಂಡಿ ಬೆಂಗಳೂರು. #KSNDMC #ಎಚ್ಚರಿಕೆವಹಿಸಿ
Next 5 days #Rainfall #Forecast maps for the #Karnataka state with district-wise warnings. Source: IMD Bengaluru@KarnatakaVarthe #KarnatakaRains pic.twitter.com/uS1hNXyZoN— Karnataka State Natural Disaster Monitoring Centre (@KarnatakaSNDMC) October 17, 2025
ರಾಜಧಾನಿ ಬೆಂಗಳೂರಿನಲ್ಲಿಯೂ ನಾಳೆ ಸಾಧಾರಣ ಮಳೆಯನ್ನು ನಿರೀಕ್ಷಿಸಲಾಗಿದೆ. ಶೇಕಡಾ 69ರಿಂದ 100ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಗಾಳಿಯ ವೇಗ ಗಂಟೆಗೆ 12-15 ಕಿ.ಮೀ. ಇರಲಿದೆ. ನಗರದ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯು ಕೆಳಗಿನ ಎಚ್ಚರಿಕೆಗಳನ್ನು ಹೊರಡಿಸಿದೆ:
-
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಸಣ್ಣ ಪ್ರಮಾಣದ ಹೊಳೆ ಉಕ್ಕುವ ಸಂಭವ ಇರುವುದರಿಂದ, ಜನರು ಅಗತ್ಯವಿಲ್ಲದೆ ಬೀದಿಗಿಳಿಯದಿರಲು ಸೂಚಿಸಲಾಗಿದೆ.
-
ಮೀನುಗಾರಿಕೆ ನಡೆಸುವವರು ಸಮುದ್ರಕ್ಕೆ ಇಳಿಯುವುದು ಬೇಡ ಎಂದು ವಿನಂತಿಮಾಡಲಾಗಿದೆ. ಗಾಳಿಯ ವೇಗ ಮತ್ತು ಅಲೆಗಳು ಅಪಾಯಕಾರಿ ಮಟ್ಟದಲ್ಲಿರಬಹುದು.
ಹೀಗಾಗಿ, ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ವಿತರಣೆ ಬೇರೆ ಬೇರೆಯಾಗಿದ್ದರೂ, ವರುಣನ ಕೋಪಾಟೋಪ ಸಾಮಾನ್ಯವಾಗಿ ಮುಂದುವರಿಯಲಿದ್ದು, ಜನರು ಅಗತ್ಯ ಎಚ್ಚರಿಕೆ ವಹಿಸಬೇಕಾಗಿದೆ.