ಯುದ್ಧದ ಬೆನ್ನಲ್ಲೇ ಒಮಾನ್‌ನಲ್ಲಿ ಮಂಗಳೂರಿನ ಯುವಕ ಆತ್ಮಹತ್ಯೆ: ಕಾರಣ ಏನು?

ಒಮಾನ್‌ನಲ್ಲಿ ಸೋಮೇಶ್ವರದ ಯುವಕ ಪುನೀತ್ ಪುಜಾರಿ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಮತ್ತು ಅಶಾಂತಿ ನೆಲೆಸಿರುವ ಬೆನ್ನಲ್ಲೇ, ಉದ್ಯೋಗಕ್ಕಾಗಿ ಒಮಾನ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ವರದಿಯಾಗಿದೆ.

ಉಳ್ಳಾಲದ ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರ ಪುನೀತ್ ಪೂಜಾರಿ (32) ಮೃತಪಟ್ಟ ದುರ್ದೈವಿ. ಕಳೆದ ಒಂದೂವರೆ ವರ್ಷಗಳಿಂದ ಒಮಾನ್‌ನ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಅಲ್ಲಿಯೇ ನೇಣಿಗೆ ಶರಣಾಗಿದ್ದಾನೆ.

ಸಾವಿಗೆ ಕಾರಣವೇನು?

ಪ್ರಾಥಮಿಕ ವರದಿಗಳ ಪ್ರಕಾರ, ಈ ಸಾವಿಗೆ ಪ್ರೇಮ ವೈಫಲ್ಯವೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ಪುನೀತ್ ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನ ಉರ್ವಾ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಆಕೆ ಪುನೀತ್‌ನಿಂದ ಅಂತರ ಕಾಯ್ದುಕೊಂಡಿದ್ದಳು. ಫೋನ್ ಕರೆಗಳನ್ನು ಸ್ವೀಕರಿಸದೆ ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸದೆ ಇದ್ದದ್ದು ಪುನೀತ್‌ನನ್ನು ತೀವ್ರ ಖಿನ್ನತೆಗೆ ದೂಡಿತ್ತು ಎಂದು ಶಂಕಿಸಲಾಗಿದೆ.

ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದ ಪುನೀತ್:

ವಿಶೇಷವೆಂದರೆ, ಪುನೀತ್ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಬಂದು ಪೋಷಕರೊಂದಿಗೆ ಸಮಯ ಕಳೆದು ಮರಳಿ ಒಮಾನ್‌ಗೆ ತೆರಳಿದ್ದ. ಪ್ರೀತಿಸಿದ ಹುಡುಗಿ ಕೈಕೊಟ್ಟ ನೋವನ್ನು ತಾಳಲಾರದೆ ಈ ಭೀಕರ ನಿರ್ಧಾರ ಕೈಗೊಂಡಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೃತದೇಹ ತರಲು ಅಡೆತಡೆ:

ಮಗನ ಸಾವಿನ ಸುದ್ದಿ ಕೇಳಿ ಸೋಮೇಶ್ವರದಲ್ಲಿರುವ ಪೋಷಕರು ಕಣ್ಣೀರಲ್ಲಿ ಮುಳುಗಿದ್ದಾರೆ. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಇರುವುದರಿಂದ ಮತ್ತು ಒಮಾನ್ ದೇಶದ ಕಠಿಣ ಕಾನೂನು ಪ್ರಕ್ರಿಯೆಗಳಿಂದಾಗಿ ಮೃತದೇಹವನ್ನು ತಾಯ್ನಾಡಿಗೆ ತರುವುದು ವಿಳಂಬವಾಗುವ ಸಾಧ್ಯತೆಯಿದೆ.

Exit mobile version