ನವದೆಹಲಿ: ನೈಋತ್ಯ ಮಾನ್ಸೂನ್ ಸಮಯದಲ್ಲಿ ಅತಿಹೆಚ್ಚು ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರಾಜ್ಯಗಳಿಗೆ ತಕ್ಷಣದ ಪರಿಹಾರ ಸಹಾಯ ಒದಗಿಸಲು ಕೇಂದ್ರ ಸರ್ಕಾರವು ನೆರೆಪರಿಹಾರ ನಿಧಿ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಗಳ ವಿಪತ್ತ್ ನಿವಾರಣಾ ನಿಧಿ (SDRF)ನ ಕೇಂದ್ರ ಪಾಲಿನ ಎರಡನೇ ಕಂತಿನ ಮುಂಗಡವಾಗಿ ಒಟ್ಟು 1,950.80 ಕೋಟಿ ರೂಪಯಿಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದ್ದಾರೆ. ಈ ನಿಧಿಯಲ್ಲಿ ಮಹಾರಾಷ್ಟ್ರಕ್ಕೆ 1,566.40 ಕೋಟಿ ರೂ. ನಿಗದಿ ಮಾಡಿದ್ದು, ಕರ್ನಾಟಕಕ್ಕೆ 384.40 ಕೋಟಿ ರೂ. ಬಿಡುಗಡೆಗೆ ಅನುಮೋದನೆ ಮಾಡಿ ಮತ್ತೆ ಅನ್ಯಾಯ ಮಾಡಿದೆ.
ಕೇಂದ್ರದ ಈ ನಿಧಿ ಬಿಡುಗಡೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಮಹಾರಾಷ್ಟ್ರಕ್ಕೆ ನಿಗದಿ ಪಡಿಸಿದ 1,566.40 ಕೋಟಿ ರೂಪಯಿಗಳು, ಕರ್ನಾಟಕಕ್ಕೆ ನಿಗದಿಯಾದ 384.40 ಕೋಟಿ ರೂಪಯಿಗಳಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.
ಈ ವರ್ಷ ಕೇಂದ್ರ ಸರ್ಕಾರವು SDRF ಅಡಿಯಲ್ಲಿ 27 ರಾಜ್ಯಗಳಿಗೆ ಒಟ್ಟು 13,603.20 ಕೋಟಿ ರೂಪಯಿಗಳನ್ನು ಬಿಡುಗಡೆ ಮಾಡಿದೆ. ರಾಷ್ಟ್ರೀಯ ವಿಪತ್ತ್ ನಿವಾರಣಾ ನಿಧಿ (NDRF) ಅಡಿಯಲ್ಲಿ 15 ರಾಜ್ಯಗಳಿಗೆ 2,189.28 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ, 21 ರಾಜ್ಯಗಳಿಗೆ ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (SDMF) 4,571.30 ಕೋಟಿ ರೂ. ಮತ್ತು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (NDMF) 09 ರಾಜ್ಯಗಳಿಗೆ 372.09 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಪ್ರವಾಹ, ಭೂಕುಸಿತ, ಮೇಘಸ್ಫೋಟ ಪೀಡಿತ ರಾಜ್ಯಗಳಿಗೆ ಎನ್‌ಡಿಆರ್‌ಎಫ್ ತಂಡಗಳು, ಸೇನಾ ತಂಡಗಳು ಮತ್ತು ವಾಯುಪಡೆಯ ಬೆಂಬಲ ಸೇರಿದಂತೆ ಎಲ್ಲಾ ತಾಂತ್ರಿಕ ಸಹಾಯವನ್ನೂ ಒದಗಿಸಿದೆ ಎಂದು ಹೇಳಲಾಗಿದೆ.