ಬೆಂಗಳೂರು, ಏಪ್ರಿಲ್ 14 : ರಾಜ್ಯದ ಲಾರಿ ಮಾಲೀಕರ ಸಂಘದಿಂದ ನೀಡಿರುವ ಕರೆ ಹಿನ್ನೆಲೆ ಇಂದಿನಿಂದಲೇ ಅನಿರ್ಧಿಷ್ಠಾವಧಿ ಲಾರಿ ಮುಷ್ಕರ ಆರಂಭವಾಗುತ್ತಿದೆ. ಡೀಸೆಲ್ ಬೆಲೆ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಹಾಗೂ ಆರ್‌ಟಿಒ ಅಧಿಕಾರಿಗಳ ಕಿರುಕುಳ ಸೇರಿದಂತೆ ಹಲವಾರು ಸಮಸ್ಯೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಲಾರಿ ಮಾಲೀಕರು ತಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರದ ನಿರ್ಧಾರ ತೆಗೆದುಕೊಂಡಿದ್ದಾರೆ.
ಮುಷ್ಕರದ ಹಿನ್ನಲೆ ಮತ್ತು ಬೇಡಿಕೆಗಳು
ಇತ್ತೀಚೆಗೆ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 2.73 ರಷ್ಟು ಹೆಚ್ಚಿಸಿ ಆದೇಶ ನೀಡಿದ್ದು, ಇದರ ಪರಿಣಾಮವಾಗಿ ಡೀಸೆಲ್ ಬೆಲೆ ಸುಮಾರು 2 ರೂಪಾಯಿ ಏರಿಕೆ ಕಂಡಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಸರ್ಕಾರ ಡೀಸೆಲ್ ದರವನ್ನು ಹೆಚ್ಚಿಸಿದ್ದು, ಇದರಿಂದ ಲಾರಿ ಮಾಲೀಕರ ಮೇಲಿನ ಆರ್ಥಿಕ ಭಾರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 14ರೊಳಗೆ ಸರ್ಕಾರ ಸ್ಪಂದಿಸಬೇಕೆಂದು ಲಾರಿ ಮಾಲೀಕರ ಸಂಘದವರು ಗಡುವು ನೀಡಿದ್ದರು. ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಬಂದಿಲ್ಲ. ಹೀಗಾಗಿ ಅವರು ಇಂದು ಮಧ್ಯರಾತ್ರಿಯಿಂದಲೇ ಮುಷ್ಕರಕ್ಕೆ ಮುಂದಾಗಿದ್ದಾರೆ.
ಲಕ್ಷಾಂತರ ಲಾರಿಗಳ ಸಂಚಾರ ಸ್ಥಗಿತ
ಸುಮಾರು 6 ಲಕ್ಷಕ್ಕೂ ಅಧಿಕ ಲಾರಿಗಳು ಈ ಮುಷ್ಕರದಲ್ಲಿ ಭಾಗವಹಿಸುತ್ತಿದ್ದು, ಇದರ ಪರಿಣಾಮವಾಗಿ ರಾಜ್ಯದೊಳಗಿನ ಹಾಗೂ ಹೊರಗಿನ ಸರಕು ಸಾಗಣೆಗೆ ದೊಡ್ಡ ವ್ಯತ್ಯಯ ಉಂಟಾಗಲಿದೆ. ಜಲ್ಲಿ ಕಲ್ಲು, ಮರಳು, ಅಕ್ಕಿ, ತೋಟಗಾರಿಕೆ ಉತ್ಪನ್ನಗಳು, ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆಗೆ ಬಳಸುವ ಲಾರಿಗಳೂ ಮುಷ್ಕರದಲ್ಲಿ ಭಾಗಿಯಾಗುತ್ತವೆ. ಅಲ್ಲದೆ ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಲಾರಿಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ ಎಂಬುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.
ಏರ್‌ಪೋರ್ಟ್ ಟ್ಯಾಕ್ಸಿಯೂ ಒಂದು ದಿನ ಮುಷ್ಕರದಲ್ಲಿ ಭಾಗಿಯಾಗಲಿದೆ
ಈ ಹಿನ್ನೆಲೆಯಲ್ಲಿ ಏಪ್ರಿಲ್ 15ರಂದು ಒಂದು ದಿನದವರೆಗೆ ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರ ಸಂಘ ಕೂಡ ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ. ಇವು ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ ಭಾಗವಹಿಸಬೇಡವೆಂಬ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿದ್ದಾರೆ. ಒಂದು ದಿನದಷ್ಟು ಟ್ಯಾಕ್ಸಿ ಸೇವೆಗಳ ಸ್ಥಗಿತವೂ ಪ್ರಯಾಣಿಕರಿಗೆ ತೊಂದರೆಯುಂಟುಮಾಡುವ ಸಾಧ್ಯತೆ ಇದೆ.
ಈ ಮುಷ್ಕರದಿಂದ ದಿನಬಳಕೆ ಅಗತ್ಯ ವಸ್ತುಗಳ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಲವಾರು ವಸ್ತುಗಳ ಬೆಲೆ ಏರಿಕೆಯಲ್ಲಿದ್ದು, ಡೀಸೆಲ್ ಬೆಲೆ ಹೆಚ್ಚಳ ಮತ್ತು ಲಾರಿ ಸೇವೆಗಳ ಸ್ಥಗಿತ ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಲಿದೆ. ಇಂಧನ ವಿತರಣಾ ಲಾರಿಗಳೂ ಮುಷ್ಕರದಲ್ಲಿ ಭಾಗಿಯಾಗುತ್ತಿರುವುದರಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಸರಬರಾಜು ಕಡಿಮೆಯಾಗುವ ಸಾಧ್ಯತೆ ಇದೆ.
ಲಾರಿ ಮಾಲೀಕರ ಬೇಡಿಕೆಗಳಿಗೆ ತ್ವರಿತ ಸ್ಪಂದನೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಇನ್ನಷ್ಟು ವಿಳಂಬವಾದರೆ ಜನಸಾಮಾನ್ಯರ ದಿನನಿತ್ಯದ ಜೀವನಕ್ಕೂ ಪರಿಣಾಮ ಉಂಟಾಗಲಿದೆ.
