ಬೆಂಗಳೂರು: ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದು, ಹಲವು ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ, ಅಕ್ರಮ ಆಸ್ತಿ ಸಂಪಾದನೆ ಹಾಗೂ ಲಂಚ ಸ್ವೀಕಾರದ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಮನೆ, ಫಾರ್ಮ್‌ಹೌಸ್ ಮತ್ತು ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ಕಲಬುರಗಿ, ಬೀದರ್, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಹಾಗೂ ಮಂಡ್ಯ ಸೇರಿದಂತೆ ವಿವಿಧೆಡೆ ಲೋಕಾಯುಕ್ತ ತಂಡಗಳು ಕಾರ್ಯಾಚರಣೆ ನಡೆಸಿವೆ.
ಕಲಬುರಗಿಯಲ್ಲಿ ಜೆಸ್ಕಾಂ AEE ಮನೆ ಮೇಲೆ ರೇಡ್
ಕಲಬುರಗಿಯಲ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಬಬಲಾದ್ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಗಳಿಸಿದ್ದಾರೆ ಎಂಬ ದೂರಿನ ಹಿನ್ನೆಲೆ ದಾಳಿ ನಡೆಸಲಾಗಿದೆ.
ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ರಾಜೇಶ್ವರಿ ಅವರ ನಿವಾಸ ಹಾಗೂ ಖಾದ್ರಿ ಚೌಕ್‌ನಲ್ಲಿರುವ ಮತ್ತೊಂದು ಮನೆಯ ಮೇಲೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಜೊತೆಗೆ ಅವರು ಕಾರ್ಯನಿರ್ವಹಿಸುತ್ತಿರುವ ಜೆಸ್ಕಾಂ ಕಚೇರಿಯಲ್ಲೂ ಪರಿಶೀಲನೆ ನಡೆದಿದೆ.
ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮನೆ ಹಾಗೂ ಕಚೇರಿಯಲ್ಲಿದ್ದ ದಾಖಲೆಗಳು, ಆಸ್ತಿ ವಿವರಗಳು ಮತ್ತು ಇತರ ಮಾಹಿತಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಅಧಿಕಾರಿಯೊಬ್ಬರು ಮನೆಗೆ ಮರಳುವಷ್ಟರಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿತ್ತು ಎನ್ನಲಾಗಿದೆ.
ಬೀದರ್‌ನಲ್ಲೂ ನಿವೃತ್ತ ಅಧಿಕಾರಿಗೆ ಲೋಕಾ ಶಾಕ್
ಬೀದರ್‌ನಲ್ಲೂ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಸೇವೆಯಿಂದ ನಿವೃತ್ತರಾಗಿರುವ ಕೃಷಿ ಇಲಾಖೆಯ ಮಾಜಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆದಿದೆ.
ಬೀದರ್ ನಗರದ ಹಕ್ಕ್ ಕಾಲೋನಿಯಲ್ಲಿರುವ ಮನೆ, ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದ ಫಾರ್ಮ್‌ಹೌಸ್ ಹಾಗೂ ಹುಮನಾಬಾದ್‌ನ ಟೀಚರ್ ಕಾಲೋನಿಯಲ್ಲಿರುವ ಮನೆ ಸೇರಿದಂತೆ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಸೇವೆಯಲ್ಲಿದ್ದಾಗ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ದೂರಿನ ಹಿನ್ನೆಲೆ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.
ಲೋಕಾಯುಕ್ತ ಎಸ್‌ಪಿ ಸಿದ್ಧರಾಜು ಹಾಗೂ ಡಿವೈಎಸ್‌ಪಿ ಹನುಮಂತರಾಯ ನೇತೃತ್ವದಲ್ಲಿ ಅಧಿಕಾರಿಗಳು ದಾಖಲೆಗಳು ಮತ್ತು ಆಸ್ತಿ ವಿವರಗಳನ್ನು ಪರಿಶೀಲಿಸಿದ್ದಾರೆ.
ಚಿತ್ರದುರ್ಗದಲ್ಲಿ ₹40 ಸಾವಿರ ಲಂಚ ಪಡೆಯುವಾಗ FDA ಬಲೆಗೆ
ಚಿತ್ರದುರ್ಗದಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಎಸಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (FDA) ಬಸವರಾಜ್ ಎಂಬುವವರು ₹40 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕೆಲ್ಲೋಡು ಗ್ರಾಮದ ಹನುಮಂತಪ್ಪ ಎಂಬುವವರ ಜಮೀನಿನ ಪಹಣಿ ತಿದ್ದುಪಡಿಗೆ ಸಂಬಂಧಿಸಿದಂತೆ ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್‌ಪಿ ಕವಲೇಪುರೆ ಹಾಗೂ ಡಿವೈಎಸ್‌ಪಿ ಕಲಾವತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಎಸಿ ಕಚೇರಿಯಲ್ಲಿನ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಹೆಸ್ಕಾಂ ಅಧಿಕಾರಿಗಳ ಮನೆ-ಕಚೇರಿಗಳ ತಪಾಸಣೆ
ಹುಬ್ಬಳ್ಳಿಯಲ್ಲೂ ಹೆಸ್ಕಾಂ AEE ಕಿರಣ್‌ಕುಮಾರ್ ಬೈಂದೂರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ಷಯ ಪಾರ್ಕ್‌ನಲ್ಲಿರುವ ಅವರ ನಿವಾಸ ಸೇರಿದಂತೆ ಒಟ್ಟು ನಾಲ್ಕು ಕಡೆ ಏಕಕಾಲದಲ್ಲಿ ಪರಿಶೀಲನೆ ನಡೆದಿದೆ.
ಕಿರಣ್‌ಕುಮಾರ್ ಅವರ ಕಚೇರಿ, ಅವರ ಸಹೋದರನ ಮನೆ ಹಾಗೂ ಅವರ ಪತ್ನಿ ಪ್ರೀತಿ ಕಾರ್ಯನಿರ್ವಹಿಸುತ್ತಿರುವ ಗೋಪನಕೊಪ್ಪ ಹೆಸ್ಕಾಂ ಕಚೇರಿಯಲ್ಲೂ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಬೆಂಗಳೂರಿನಲ್ಲೂ ನಿವೃತ್ತ BBMP AEE ಮನೆ ಮೇಲೆ ದಾಳಿ
ರಾಜಧಾನಿ ಬೆಂಗಳೂರಿನಲ್ಲೂ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ ನಡೆದಿದೆ. ನಿವೃತ್ತ BBMP AEE ರಂಗನಾಥ್ ಅವರಿಗೆ ಸಂಬಂಧಿಸಿದ ಸ್ಥಳದಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಬೆಳಗ್ಗೆಯಿಂದಲೇ ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಮಂಡ್ಯದಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕರ ಮನೆ ಮೇಲೆ ರೇಡ್
ಮಂಡ್ಯದಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕ ಶಿವರಾಜ್ ಅವರ ಮನೆ ಹಾಗೂ ಫಾರ್ಮ್‌ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕಳೆದ ತಿಂಗಳಷ್ಟೇ ನಿವೃತ್ತರಾಗಿದ್ದ ಶಿವರಾಜ್, ಹಾಸ್ಟೆಲ್ ಮಕ್ಕಳಿಗೆ ನೀಡಬೇಕಿದ್ದ ಪುಸ್ತಕಗಳು ಹಾಗೂ ಬೆಡ್‌ಶೀಟ್‌ಗಳನ್ನು ಫಾರ್ಮ್‌ಹೌಸ್‌ನಲ್ಲಿ ಇರಿಸಿದ್ದರು ಎಂಬ ಆರೋಪದ ಹಿನ್ನೆಲೆ ಪರಿಶೀಲನೆ ನಡೆದಿದೆ.
ದಾಳಿ ವೇಳೆ ದುಬಾರಿ ಮದ್ಯದ ಬಾಟಲಿಗಳು, ಚಿನ್ನ, ಬೆಳ್ಳಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಲೋಕಾಯುಕ್ತ ಪೊಲೀಸರು ವಸ್ತುಗಳು ಮತ್ತು ದಾಖಲೆಗಳ ಕುರಿತು ಮತ್ತಷ್ಟು ತನಿಖೆ ಮುಂದುವರಿಸಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್‌ಪಿ ಹಾಗೂ ಲೋಕಾಯುಕ್ತ ಪೊಲೀಸ್ ಬ್ಯಾಟರಾಯಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
