ರಾಜ್ಯದಲ್ಲಿ (ಕರ್ನಾಟಕ) ಕಳೆದ 30 ದಿನಗಳಲ್ಲಿ ಮದ್ಯದ ಮಾರಾಟವು (Liquor Sales) ಸಾರ್ವಕಾಲಿಕ ದಾಖಲೆಯೊಂದನ್ನು (New Record) ಸೃಷ್ಟಿಸಿದೆ. ಹೊಸ ಅಬಕಾರಿ ನೀತಿ ಜಾರಿಗೆ ಬಂದ ಕೇವಲ ಒಂದೇ ತಿಂಗಳಲ್ಲಿ ಅಬಕಾರಿ ಇಲಾಖೆಯ ಖಜಾನೆಗೆ ಕೋಟಿ ಕೋಟಿ ರೂಪಾಯಿ ಆದಾಯ ಹರಿದುಬಂದಿದ್ದು, ಈ ಭರ್ಜರಿ ವ್ಯಾಪಾರವು ಎಲ್ಲಾ ಹಳೆಯ ದಾಖಲೆಗಳನ್ನು ಉಡೀಸ್ ಮಾಡಿದೆ.
ಮೇ ಮತ್ತು ಜೂನ್ ತಿಂಗಳ ಮದ್ಯದ ವ್ಯಾಪಾರದಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 3,509 ಕೋಟಿ ರೂಪಾಯಿಗೂ ಅಧಿಕ ಆದಾಯ ಲಭಿಸಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ (ಮೇ 11 – ಜೂನ್ 11) ದಾಖಲಾಗಿದ್ದ 3,022 ಕೋಟಿ ರೂಪಾಯಿಗಳಿಗಿಂತ ಭಾರಿ ಹೆಚ್ಚಳವಾಗಿದೆ. ಈ ಭರ್ಜರಿ ವ್ಯಾಪಾರದಿಂದ ರಾಜ್ಯದ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಜೇಬು ಕೂಡ ತುಂಬಿದೆ.
ಆಸ್ಕೋಹಾಲ್ ಇನ್ ಬೆವರೇಜ್ (ಮದ್ಯದಲ್ಲಿರುವ ಆಲ್ಕೋಹಾಲ್ ಅಂಶ) ಆಧರಿಸಿ ತೆರಿಗೆ ವಿಧಿಸುವ ಹೊಸ ಅಬಕಾರಿ ನೀತಿಯು ಸರ್ಕಾರಕ್ಕೆ ಅತ್ಯಂತ ಭರ್ಜರಿ ಆರಂಭವನ್ನು ನೀಡಿದೆ. ಈ ಹೊಸ ನಿಯಮವು ಜಾರಿಗೆ ಬಂದ ಕೇವಲ ಒಂದು ತಿಂಗಳೊಳಗೆ 3,509 ಕೋಟಿ ರೂ. ಆದಾಯ ಹರಿದುಬಂದಿದೆ. ಈ ಕುರಿತು ಮಾತನಾಡಿರುವ ಮದ್ಯ ಮಾರಾಟಗಾರ ಗಿರೀಶ್ ಅವರು, ಕಳೆದ 30 ದಿನಗಳಲ್ಲಿ ಮದ್ಯದ ವ್ಯಾಪಾರದಲ್ಲಿ ಶೇಕಡಾ 20 ರಷ್ಟು ಭಾರಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಕಡಿಮೆ ಬೆಲೆಯ ಮದ್ಯದ ಬ್ರಾಂಡ್‌ಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದರೂ, ಮದ್ಯದ ಮಾರಾಟಕ್ಕೆ ಯಾವುದೇ ಬ್ರೇಕ್ ಬಿದ್ದಿಲ್ಲ. ಮದ್ಯಪ್ರಿಯರು ಬೆಲೆ ಏರಿಕೆಯನ್ನು ಲೆಕ್ಕಿಸದೆ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಅದರಲ್ಲೂ ಈ ಬಾರಿ ಬಿಯರ್ ಭಾರಿ ಪ್ರಮಾಣದಲ್ಲಿ ಮಾರಾಟವಾಗಿ ಹೊಸ ದಾಖಲೆ ಬರೆದಿದೆ.
ಬಿಯರ್ ಮತ್ತು ಐಎಂಎಲ್ ಮಾರಾಟದ ಅಂಕಿಅಂಶಗಳು
ಕಳೆದ ವರ್ಷ ಮೇ 11 ರಿಂದ ಜೂನ್ 11ರ ಅವಧಿಗೆ ಹೋಲಿಸಿದರೆ, ಈ ವರ್ಷ ಇದೇ ಅವಧಿಯಲ್ಲಿ ಬಿಯರ್ ಮಾರಾಟವು ಶೇಕಡಾ 59.4 ರಷ್ಟು ಭಾರಿ ಏರಿಕೆ ಕಂಡಿದ್ದು, ಬರೋಬ್ಬರಿ 403.1 ಲಕ್ಷ ಲೀಟರ್ ಬಿಯರ್ ಖಾಲಿಯಾಗಿದೆ. ಇತ್ತ ಐಎಂಎಲ್ (IML – Indian Made Liquor) ಮದ್ಯದ ಮಾರಾಟವೂ ಗಣನೀಯವಾಗಿ ಹೆಚ್ಚಾಗಿದ್ದು, 443.5 ಲಕ್ಷ ಲೀಟರ್‌ಗೆ ಜಿಗಿದಿದೆ. ಒಟ್ಟು ಮದ್ಯ ಮಾರಾಟದಲ್ಲಿ ಬಿಯರ್ ಪಾಲು ಗಣನೀಯವಾಗಿ ಹೆಚ್ಚಿದ್ದು, ಬಿಸಿಲಿನ ತಾಪಮಾನವೂ ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ವಿಪರೀತ ಬಿಸಿಲು ಇದ್ದ ಕಾರಣಕ್ಕಾಗಿ ಜನರು ಬಿಯರ್ ಮೊರೆ ಹೋದರೋ, ಅಥವಾ ಬದುಕಿನ ಜಂಜಾಟಗಳಿಂದ ಬೇಸತ್ತು ಕುಡಿದರೋ ಗೊತ್ತಿಲ್ಲ. ಆದರೆ, ಮದ್ಯಪ್ರಿಯರು ಮುಗಿಬಿದ್ದು ಮದ್ಯ ಖರೀದಿಸಿ ಸರ್ಕಾರದ ಖಜಾನೆಯನ್ನು ಗಟ್ಟಿ ಮಾಡಿರುವುದು ಸದ್ಯದ ಹಸಿಬಿಸಿ ಸತ್ಯವಾಗಿದೆ.
