ಬೆಂಗಳೂರು: ಕರ್ನಾಟಕದಲ್ಲಿ (Karnataka) ಮದ್ಯ ಮಾರಾಟದ (Liquor Sale) ಇತಿಹಾಸದಲ್ಲೇ ಹಿಂದೆಂದೂ ಕಾಣದ ಭರ್ಜರಿ ದಾಖಲೆಯೊಂದು ಸೃಷ್ಟಿಯಾಗಿದೆ. ಪ್ರಸಕ್ತ 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ರಾಜ್ಯ ಸರ್ಕಾರದ ಅಬಕಾರಿ ಆದಾಯದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದ್ದು, ಇದು ರಾಜ್ಯದ ಮದ್ಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ.
ಬೆಲೆ ಏರಿಕೆಯಿಂದ ಕುಸಿದಿದ್ದ ಮಾರಾಟ
ಕಳೆದ ಕೆಲವು ತಿಂಗಳುಗಳ ಹಿಂದೆ ಕರ್ನಾಟಕದಲ್ಲಿ ಮದ್ಯದ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು. ಈ ಬೆಲೆ ಹೆಚ್ಚಳವು ಮದ್ಯ ಮಾರಾಟದ ಮೇಲೆ ನೇರ ಪರಿಣಾಮ ಬೀರಿತ್ತು. ಬೆಲೆ ಏರಿಕೆಯಿಂದ ಬೇಸತ್ತ ಗ್ರಾಹಕರು ಮದ್ಯ ಖರೀದಿ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿದ್ದರು. ಇದರಿಂದಾಗಿ ಮದ್ಯ ಮಾರಾಟ ಕುಸಿದು ಸರ್ಕಾರದ ಆದಾಯಕ್ಕೂ ದೊಡ್ಡ ಹೊಡೆತ ಬಿದ್ದಿತ್ತು. ಆದರೆ, ಇತ್ತೀಚೆಗೆ ಸರ್ಕಾರ ಕೈಗೊಂಡ ಒಂದು ಮಹತ್ವದ ತಂತ್ರವು ಇಡೀ ಮಾರುಕಟ್ಟೆಯ ಚಿತ್ರಣವನ್ನೇ ಬದಲಾಯಿಸಿದೆ.
ಬೆಲೆ ಇಳಿಕೆ ಬೆನ್ನಲ್ಲೇ ಚಿಮ್ಮಿದ ಬಿಯರ್ ಮಾರಾಟ
ರಾಜ್ಯ ಸರ್ಕಾರವು ಇತ್ತೀಚೆಗೆ ಶೇ. 5ಕ್ಕಿಂತ ಕಡಿಮೆ ಆಲ್ಕಹಾಲ್ ಪ್ರಮಾಣ ಹೊಂದಿರುವ ಪ್ರೀಮಿಯಂ ಲಾಗರ್ ಬಿಯರ್‌ಗಳ ದರವನ್ನು ಗಣನೀಯವಾಗಿ ಇಳಿಕೆ ಮಾಡಿ ಪರಿಷ್ಕರಿಸಿತ್ತು. ಬೆಲೆ ಇಳಿಕೆಯಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಬಿಯರ್ ಖರೀದಿ ಪ್ರಮಾಣ ಹೆಚ್ಚಿದೆ.
ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲೇ ಬಿಯರ್ ಮಾರಾಟದಲ್ಲಿ ಶೇ. 19.5 ರಷ್ಟು ಭಾರಿ ಪ್ರಗತಿ ದಾಖಲಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ. ಕೇವಲ ಬಿಯರ್ ಮಾರಾಟದಿಂದಲೇ ಮೊದಲ ಮೂರು ತಿಂಗಳಲ್ಲಿ ಬರೋಬ್ಬರಿ ₹1,914.81 ಕೋಟಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹312.67 ಕೋಟಿ ಹೆಚ್ಚುವರಿ ಲಾಭ ಸರ್ಕಾರದ ಖಜಾನೆಗೆ ಸೇರಿದಂತಾಗಿದೆ.
ದೇಶದಲ್ಲೇ ಮೊದಲು ಆಲ್ಕೋಹಾಲ್ ಪ್ರಮಾಣ ಆಧಾರಿತ ತೆರಿಗೆ ನೀತಿ
ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ ನೂತನ ವೈಜ್ಞಾನಿಕ ಪದ್ಧತಿಯನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಬೇಸಿಗೆಯ ಬಿಸಿಲಿನ ಬೇಗೆ ತೀವ್ರವಾಗಿದ್ದರಿಂದ ಮತ್ತು ಪ್ರೀಮಿಯಂ ಲಾಗರ್ ಬಿಯರ್‌ಗಳ ಬೆಲೆ ಇಳಿಕೆಯಾಗಿದ್ದರಿಂದ ಗ್ರಾಹಕರು ಬಿಯರ್ ಕಡೆಗೆ ಹೆಚ್ಚಿನ ಒಲವು ತೋರಿದ್ದಾರೆ. ಇದು ಮಾರಾಟದ ದಿಢೀರ್ ಮೇಲೇರಲು ಪ್ರಮುಖ ಕಾರಣವಾಗಿದೆ.
ಸ್ಲಾಬ್‌ಗಳ ಕಡಿತ; ಖಜಾನೆ ತುಂಬಿಸಿದ ಹೊಸ ಅಬಕಾರಿ ನೀತಿ
ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ನೀತಿಯ ಅನ್ವಯ ಮದ್ಯದ ದರ ನಿಗದಿಯ ಸ್ಲಾಬ್‌ಗಳನ್ನು 16 ರಿಂದ 8ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ ಪ್ರೀಮಿಯಂ ಬ್ಯಾಂಡ್‌ಗಳ (ಉದಾಹರಣೆಗೆ ಸ್ಕಾಚ್ ವಿಸ್ಕಿ) ಹಾಗೂ ಲಘು ಬಿಯರ್‌ಗಳ ಬೆಲೆಯಲ್ಲಿ ಶೇ. 20 ರಿಂದ ಶೇ. 25 ರಷ್ಟು ಕಡಿತವಾಗಿದೆ. ಆದರೆ, ಇದೇ ಅವಧಿಯಲ್ಲಿ ಕಡಿಮೆ ಬೆಲೆಯ ಸಾಮಾನ್ಯ ಮದ್ಯದ (IMFL) ದರಗಳಲ್ಲಿ ಸ್ವಲ್ಪ ಮಟ್ಟಿನ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಒಂದೇ ತಿಂಗಳಲ್ಲಿ ₹3,745 ಕೋಟಿ ದಾಖಲೆಯ ಆದಾಯ
ಒಟ್ಟಾರೆಯಾಗಿ ಸರ್ಕಾರದ ಈ ಹೊಸ ತೆರಿಗೆ ತಂತ್ರವು ಅಬಕಾರಿ ಇಲಾಖೆಯ ಖಜಾನೆಯನ್ನು ಅತ್ಯಂತ ಯಶಸ್ವಿಯಾಗಿ ತುಂಬಿಸುತ್ತಿದೆ. ಹೊಸ ನೀತಿ ಜಾರಿಯಾದ ಕೇವಲ ಒಂದು ತಿಂಗಳ ಅವಧಿಯಲ್ಲಿ (ಮೇ 11 ರಿಂದ ಜೂನ್ 11ರವರೆಗೆ) ಕರ್ನಾಟಕ ಸರ್ಕಾರಕ್ಕೆ ₹3,745 ಕೋಟಿಗೂ ಅಧಿಕ ದಾಖಲೆಯ ಆದಾಯ ಹರಿದುಬಂದಿದ್ದು, ಮುಂಬರುವ ದಿನಗಳಲ್ಲೂ ಈ ಆದಾಯದ ಬೆಳವಣಿಗೆಯ ವೇಗ ಹೀಗೆಯೇ ಮುಂದುವರಿಯುವ ಮುನ್ಸೂಚನೆ ಸಿಕ್ಕಿದೆ.
