ಕರ್ನಾಟಕದಲ್ಲಿ ಒಣ ಹವೆ: ಬೆಂಗಳೂರಲ್ಲಿ ದಿನವಿಡೀ ಮಂಜು ಮುಸುಕಿದ ಹವಾಮಾನ

Web 2025 12 08T075016.865

ಕರ್ನಾಟಕದಾದ್ಯಂತ ಕಳೆದ ಎರಡು ದಿನಗಳಿಂದ ಮಳೆಯ ಲೆಕ್ಕವೇ ಇಲ್ಲದೇ ಪೂರ್ತಿ ಒಣ ಹವೆಯ ವಾತಾವರಣ ಮುಂದುವರಿದಿದೆ. ಇಂದು ಸೋಮವಾರವೂ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯ ಸಾಧ್ಯತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸ್ಪಷ್ಟವಾಗಿ ತಿಳಿಸಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಎಲ್ಲೆಡೆಯೂ ಸಂಪೂರ್ಣ ಒಣ ಹವೆಯೇ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ಮತ್ತೊಮ್ಮೆ ಮಂಜಿನ ಆವರಣ

ನಗರದಲ್ಲಿ ಬೆಳಗ್ಗೆಯಿಂದಲೇ ದಟ್ಟ ಮಂಜು ಕವಿದ ವಾತಾವರಣವಿದ್ದು, ಗೋಚರತೆ ಕಡಿಮೆಯಾಗಿದೆ. ಬೆಳಗ್ಗೆ 8 ಗಂಟೆಯ ನಂತರವೂ ಮಂಜು ಸಂಪೂರ್ಣವಾಗಿ ತೆರವಾಗಿಲ್ಲ. ಇಂದು ಗರಿಷ್ಠ ತಾಪಮಾನ 27° ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 16.4° ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಪ್ರತಿ ಗಂಟೆಗೆ 8 ಕಿ.ಮೀ. ಮಾತ್ರ. ರಾತ್ರಿ ಮತ್ತು ಬೆಳಗ್ಗೆ ತೀವ್ರ ಚಳಿ ಎದುರಿಸಬೇಕಿದೆ. ಚಳಿಗಾಲದ ಉಡುಪು, ಶಾಲು-ಕಂಬಳಿ ರೆಡಿ ಇಡಿ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಣ ಹವೆ

ಈ ಒಣ ಹವೆಯಿಂದಾಗಿ ಬೆಳೆಗಳಿಗೆ ನೀರಾವರಿ ಅಗತ್ಯವಿದ್ದು, ರೈತರು ಗಮನ ಹರಿಸಬೇಕು. ಜತೆಗೆ ಚಳಿಯಿಂದ ಉಸಿರಾಟದ ಸಮಸ್ಯೆ ಇರುವವರು ಮಕ್ಕಳು ಮತ್ತು ಹಿರಿಯರು ಎಚ್ಚರ ವಹಿಸಿ.

ಮುಂದಿನ ಐದು ದಿನಗಳ ವಾತಾವರಣ

IMD ಪ್ರಕಾರ ಡಿಸೆಂಬರ್ 12-13ರ ವರೆಗೂ ರಾಜ್ಯದಲ್ಲಿ ಮಳೆಯ ಸಾಧ್ಯತೆ ಶೂನ್ಯ. ಆದರೆ ರಾತ್ರಿ-ಬೆಳಗ್ಗೆ ಚಳಿ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15° ಸೆಲ್ಸಿಯಸ್‌ಗೆ ಇಳಿಯಬಹುದು ಎಂಬ ಮುನ್ಸೂಚನೆ ಇದೆ.

ಚಳಿಗಾಲದ ಈ ಸೀಸನ್‌ನಲ್ಲಿ ಬೆಂಗಳೂರು ಹಾಗೂ ಒಳನಾಡಿನಲ್ಲಿ ಮಂಜು-ಚಳಿ ಕಾಂಬಿನೇಷನ್ ಆರಂಭವಾಗಿದೆ. ಬೆಳಗ್ಗೆ ವಾಹನ ಚಾಲಕರು ಹೆಚ್ಚು ಎಚ್ಚರಿಕೆ ವಹಿಸಿ, ಫಾಗ್ ಲೈಟ್ ಆನ್ ಮಾಡಿ, ಸ್ಲೋ ಡ್ರೈವ್ ಮಾಡಿ.

Exit mobile version