ರಾಜೀವ್‌ ಗೌಡಗೆ ಹೈಕೋರ್ಟ್ ಛೀಮಾರಿ: ಎಫ್‌ಐಆರ್ ರದ್ದು ಕೋರಿದ್ದ ಅರ್ಜಿ ವಜಾ

Untitled design 2026 01 22T173920.027

ಬೆಂಗಳೂರು: ಮಹಿಳಾ ಅಧಿಕಾರಿಯೊಬ್ಬರಿಗೆ ಫೋನ್ ಕರೆ ಮಾಡಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರಿಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ರದ್ದುಪಡಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ವಜಾಗೊಳಿಸಿದೆ.

ವಿಚಾರಣೆ ವೇಳೆ ರಾಜೀವ್ ಗೌಡ ಪರ ವಕೀಲರು, ಆರೋಪಿಯು ಈಗಾಗಲೇ ಮಾಧ್ಯಮಗಳ ಮುಂದೆ ಕ್ಷಮೆ ಕೇಳಿದ್ದಾರೆ ಮತ್ತು ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ವಾದ ಮಂಡಿಸಿದರು. ಆದರೆ, ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯವು, ಅರ್ಜಿದಾರನಿಗೆ ಮಹಿಳೆಯರೆಂದರೆ ಗೌರವ ಇಲ್ಲವೇ ಎಂದು ಪ್ರಶ್ನೆ ಮಾಡಿತ್ತು. ಅಲ್ಲದೆ, ಒಮ್ಮೆ ಮಾತನಾಡಿದರೆ ವಾಪಸ್ ಪಡೆಯಲು ಆಗುವುದಿಲ್ಲ. ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು. ನೀವು ಕ್ಷಮೆ ಕೇಳಿದರೂ ಒಡೆದಿರುವುದು ಒಂದಾಗುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಅರ್ಜಿ ವಿಚಾರಣೆ ಸಂಬಂಧ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.

ಹೈಕೋರ್ಟ್ ಅರ್ಜಿ ವಜಾಗೊಳಿಸಿರುವುದು ಒಂದೆಡೆಯಾದರೆ, ಇತ್ತ ಚಿಕ್ಕಬಳ್ಳಾಪುರದ ಸೆಷನ್ಸ್ ನ್ಯಾಯಾಲಯದಲ್ಲೂ ಅವರಿಗೆ ಸಂಕಷ್ಟ ಎದುರಾಗಿದೆ. ರಾಜೀವ್ ಗೌಡ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರು ಬಲವಾದ ತಕರಾರು ಸಲ್ಲಿಸಿದ್ದಾರೆ. ಆರೋಪಿಯು ಪ್ರಭಾವಿಯಾಗಿದ್ದು, ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ ಎಂದು ತಕರಾರು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿರುವ ಕೋರ್ಟ್, ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ಪ್ರಕರಣ: ಕಾಂಗ್ರೆಸ್‌ನಿಂದ ರಾಜೀವ್‌ಗೌಡ ಕಿಕ್‌ಔಟ್

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ವಿರುದ್ಧ ಇದೀಗ ಪಕ್ಷವೇ ಕಠಿಣ ಕ್ರಮ ಕೈಗೊಂಡಿದೆ. ಗಂಭೀರ ಶಿಸ್ತು ಉಲ್ಲಂಘನೆಯ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜೀವ್‌ಗೌಡ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ನಗರಸಭೆ ಪೌರಾಯುಕ್ತರಿಗೆ ಬೆದರಿಕೆ ಹಾಕಿದ ಪ್ರಕರಣವು ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿತು. ಗಂಭೀರ ಶಿಸ್ತು ಉಲ್ಲಂಘನೆಯ ಆರೋಪ ಹಿನ್ನೆಲೆ ರಾಜೀವ್‌ಗೌಡ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಅಧಿಕೃತವಾಗಿ ಶಿಫಾರಸು ಮಾಡಿದ್ದಾರೆ. ಈ ಶಿಫಾರಸನ್ನು ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷರಾದ ಹಿರಿಯ ನಾಯಕ ರೆಹಮಾನ್ ಖಾನ್ ಅವರಿಗೆ ಸಲ್ಲಿಸಲಾಗಿದೆ.ರಾಜೀವ್‌ಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮುನ್ನ ಕೆಪಿಸಿಸಿ ವತಿಯಿಂದ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್‌ಗೆ ಸ್ಪಷ್ಟ ಉತ್ತರ ನೀಡದಿರುವುದು ಹಾಗೂ ಆರೋಪಗಳಿಗೆ ಸಮರ್ಪಕ ಸ್ಪಷ್ಟನೆ ನೀಡದ ಹಿನ್ನಲೆಯಲ್ಲಿ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ.

Exit mobile version