ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ಸರ್ಕಾರ ಸೂಕ್ತ ಮಾರ್ಗಸೂಚಿ ಹೊರಡಿಸದ ಹೊರತು ‘ಬೈಕ್ ಟ್ಯಾಕ್ಸಿ’ಗಳಿಗೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಹೈಕೋರ್ಟ್ ತನ್ನ ಆದೇಶದಲ್ಲಿ, ರಾಜ್ಯ ಸರ್ಕಾರವು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸದ ತನಕ ಓಲಾ, ಉಬರ್, ಱಪಿಡೋ ಸೇರಿದಂತೆ ಯಾವುದೇ ಸಂಸ್ಥೆಗಳಿಗೂ ಬೈಕ್ ಟ್ಯಾಕ್ಸಿ ಸೇವೆ ಒದಗಿಸಲು ಅವಕಾಶವಿಲ್ಲ ಎಂದು ಹೇಳಿದೆ. ಈ ಸಂಬಂಧ, ಮುಂದಿನ 6 ವಾರಗಳಲ್ಲಿ ರಾಜ್ಯ ಸರ್ಕಾರವು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಹಾಗೂ ಅದನ್ನು ಅನುಸರಿಸುವಂತೆ ಖಚಿತಪಡಿಸಬೇಕು ಎಂದು ಹೈಕೋರ್ಟ್ ಗಡುವು ನೀಡಿದೆ.
ಹೈಕೋರ್ಟ್ ಆದೇಶ
ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 3 ಅಡಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಸರ್ಕಾರದಿಂದಲೇ ವಿಶೇಷ ಮಾರ್ಗಸೂಚಿಗಳು ಹೊರಡಿಸಬೇಕಾಗುತ್ತದೆ. ಹೀಗಾಗಿ, ಈ ಮಾರ್ಗಸೂಚಿಗಳಿಲ್ಲದೆ ಈ ಸೇವೆ ಮುಂದುವರಿಯಲು ಅವಕಾಶವಿಲ್ಲವೆಂದು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಅಧ್ಯಕ್ಷತೆಯ ಪೀಠ ತೀರ್ಮಾನಿಸಿದೆ.
ಈ ಸಂಬಂಧ ಉಬರ್ ಇಂಡಿಯಾ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್, ರೊಪ್ಪೆನ್ ಟ್ರಾನ್ಸ್‌ಪೊರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳನ್ನು ಪರಿಗಣಿಸಿದ ಹೈಕೋರ್ಟ್, ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸದವರೆಗೆ ಈ ಸೇವೆಗೆ ಅವಕಾಶ ನೀಡಲು ಸಾಧ್ಯವಿಲ್ಲವೆಂದು ಆದೇಶಿಸಿದೆ.
ಅರ್ಜಿದಾರರ ವಾದ:
ಅರ್ಜಿದಾರರಾದ ಈ ವಾಹನ ಸೇವೆ ಕಂಪನಿಗಳು, 2022ರ ಫೆಬ್ರವರಿ 19ರಂದು ಕರ್ನಾಟಕ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯಲ್ಲಿ, ಮೋಟಾರ್ ಬೈಕ್‌ಗಳಿಗೆ ಸಾರಿಗೆ ವಾಹನಗಳ ಪರವಾನಗಿ ನೀಡುವಂತೆ ಹಾಗೂ ಸರ್ಕಾರ ಈ ಸಂಬಂಧ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಲು ಸೂಚಿಸುವಂತೆ ಕೋರಲಾಗಿತ್ತು. ಆದರೆ, ಈ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದರಿಂದಾಗಿ, ತಮಗೆ ತಮ್ಮ ವ್ಯಾಪಾರವನ್ನು ಮುಂದುವರಿಸುವ ಅವಕಾಶ ನೀಡಬೇಕೆಂದು ಈ ಕಂಪನಿಗಳು ಮನವಿ ಮಾಡಿಕೊಂಡಿದ್ದವು.
ಈ ಆದೇಶದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗುತ್ತದೆ. ಹಾಗೆಯೇ, ಈ ಸೇವೆಯನ್ನು ಬಳಸುವ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗಳತ್ತ ತಿರುಗಬೇಕಾಗುತ್ತದೆ. ಇದಲ್ಲದೇ, ಈ ಸೇವೆಯಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಚಾಲಕರು ಉದ್ಯೋಗ ಕಳೆದುಕೊಳ್ಳಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ಈಗ ರಾಜ್ಯ ಸರ್ಕಾರವು 6 ವಾರಗಳಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಿ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕಾಗಿದೆ. ಈ ಮಾರ್ಗಸೂಚಿಗಳು ಹೊರಬಂದ ನಂತರ ಮಾತ್ರ ಬೈಕ್ ಟ್ಯಾಕ್ಸಿ ಸೇವೆಗಳು ಪುನಾರಂಭವಾಗುವ ಸಾಧ್ಯತೆ ಇದೆ. ಆದ್ದರಿಂದ, ಓಲಾ, ಉಬರ್, ಱಪಿಡೋ ಹಾಗೂ ಇತರ ಕಂಪನಿಗಳು ಸರ್ಕಾರದ ನಿರ್ಧಾರದತ್ತ ಕಾದು ನೋಡಬೇಕಾಗಿದೆ.