ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಸುತ್ತಾಡುತ್ತಾ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (EVM)ಗಳು ಸರಿಯಲ್ಲ, ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಸೇರಿ ಆಕ್ರಮ ನಡೆಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ‘ವೋಟ್ ಚೋರಿ’ ಎಂಬ ಪದವನ್ನೇ ಬಳಸಿ ಈ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಈ ಆರೋಪಗಳಿಗೆ ಕರ್ನಾಟಕದಿಂದಲೇ ದೊಡ್ಡ ತಿರುಗೇಟು ನೀಡಿದ್ದು, ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರದ ಅಡಿಯಲ್ಲಿರುವ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯೇ ರಾಹುಲ್ ಗಾಂಧಿ ಅವರ ಆರೋಪಗಳನ್ನು ತಳ್ಳಿಹಾಕಿದೆ.
ಕರ್ನಾಟಕ ಸರ್ಕಾರದ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಪ್ರಾಧಿಕಾರ (Karnataka Monitoring and Evaluation Authority – KMEA) ನಡೆಸಿರುವ ಸಮೀಕ್ಷೆ, ರಾಜ್ಯದ ಜನರು ಭಾರತೀಯ ಚುನಾವಣಾ ವ್ಯವಸ್ಥೆಯನ್ನು ಮುಕ್ತ, ನ್ಯಾಯಯುತವಾಗಿದೆ ಎಂದು ಸ್ಪಷ್ಟಪಡಿಸಿದೆ. ವಿಶೇಷವಾಗಿ, ಇವಿಎಂಗಳ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ವಿಶ್ವಾಸವಿರುವುದು ಈ ವರದಿಯ ಪ್ರಮುಖ ಅಂಶವಾಗಿದೆ.
ಸಮೀಕ್ಷೆಯ ವಿವರಗಳು
2025ರ ಆಗಸ್ಟ್‌ನಲ್ಲಿ ನಡೆಸಲಾದ ಈ ಸಮೀಕ್ಷೆ, ರಾಜ್ಯದ ನಾಲ್ಕು ಪ್ರಮುಖ ಆಡಳಿತ ವಿಭಾಗಗಳ 102 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. ಗ್ರಾಮೀಣ, ನಗರ ಮತ್ತು ಮೀಸಲು ಕ್ಷೇತ್ರಗಳನ್ನೂ ಸೇರಿಸಿ ಒಟ್ಟು 5,100 ಮತದಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಅಧ್ಯಯನವು ರಾಜಕೀಯ ಪಕ್ಷವೊಂದರಲ್ಲ, ಬದಲಾಗಿ ಸರ್ಕಾರದ ಅಧಿಕೃತ ಸಂಸ್ಥೆಯಿಂದ ನಡೆಸಲಾಗಿದೆ.
ಜನರ ಅಭಿಪ್ರಾಯ
ಸಮೀಕ್ಷೆಯ ಪ್ರಕಾರ, ಶೇಕಡಾ 91.31 ರಷ್ಟು ಜನರು ಭಾರತದಲ್ಲಿ ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ನಡೆಯುತ್ತಿವೆ ಎಂದು ಹೇಳಿದ್ದಾರೆ. ಕೇವಲ ಶೇಕಡಾ 6.76 ರಷ್ಟು ಜನರು ಮಾತ್ರ ತಟಸ್ಥರಾಗಿದ್ದು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಇದು ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಸ್ಪಷ್ಟವಾಗಿ ತೋರಿಸುತ್ತದೆ.
-
ಕಲಬುರಗಿ ವಿಭಾಗದಲ್ಲಿ ಶೇಕಡಾ 84.67%
-
ಮೈಸೂರಿನಲ್ಲಿ 72.08%
-
ಬೆಳಗಾವಿಯಲ್ಲಿ 69.62%
-
ಬೆಂಗಳೂರು ವಿಭಾಗದಲ್ಲಿ 67.11%
ಜನರು ಚುನಾವಣೆಗಳ ಪಾರದರ್ಶಕತೆಯನ್ನು ಒಪ್ಪಿಕೊಂಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ತಟಸ್ಥರ ಪ್ರಮಾಣ ಸ್ವಲ್ಪ ಹೆಚ್ಚಿದ್ದರೂ, ಬಹುಪಾಲು ಮತದಾರರು ವ್ಯವಸ್ಥೆಯನ್ನು ಬೆಂಬಲಿಸಿದ್ದಾರೆ.
EVM ಮೇಲಿನ ವಿಶ್ವಾಸ
ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಇವಿಎಂಗಳ ಬಗ್ಗೆ ನಿರಂತರ ಅನುಮಾನ ವ್ಯಕ್ತಪಡಿಸುತ್ತಿದ್ದರೂ, ಜನರ ಅಭಿಪ್ರಾಯ ಸಂಪೂರ್ಣ ಭಿನ್ನವಾಗಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 83.61 ರಷ್ಟು ಜನರು ಇವಿಎಂಗಳ ಮೇಲೆ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಕೇವಲ ಶೇಕಡಾ 8.75 ರಷ್ಟು ಜನರು ಮಾತ್ರ ಇವಿಎಂಗಳ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ವಿಭಾಗವಾರು ವಿವರ
-
ಕಲಬುರಗಿ: 83.24% ಒಪ್ಪಿಗೆ, 11.24% ಬಲವಾದ ಒಪ್ಪಿಗೆ
-
ಮೈಸೂರು: 70.67% ಒಪ್ಪಿಗೆ, 17.92% ಬಲವಾದ ಒಪ್ಪಿಗೆ
-
ಬೆಳಗಾವಿ: 63.90% ಒಪ್ಪಿಗೆ, 21.43% ಬಲವಾದ ಒಪ್ಪಿಗೆ
-
ಬೆಂಗಳೂರು: 63.67% ಒಪ್ಪಿಗೆ, ಆದರೆ 15.67% ತಟಸ್ಥರು
ಇದರಿಂದ, ಇವಿಎಂಗಳ ನಿಖರತೆ ಕುರಿತು ಜನರಲ್ಲಿ ಯಾವುದೇ ದೊಡ್ಡ ಅನುಮಾನ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಬ್ಯಾಲೆಟ್ ಪೇಪರ್ ವಾದಕ್ಕೆ ಹೊಡೆತ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂಗಳ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂಬ ಸಿದ್ದರಾಮಯ್ಯ ಸರ್ಕಾರದ ಪ್ರಸ್ತಾಪದ ಹಿನ್ನಲೆಯಲ್ಲಿ ಈ ವರದಿ ಹೊರಬಂದಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ. ಸರ್ಕಾರವೇ ಮುಂದಿಟ್ಟಿದ್ದ “ಜನರಿಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲ” ಎಂಬ ವಾದವನ್ನು, ಅದರದೇ ಅಧೀನ ಸಂಸ್ಥೆಯ ವರದಿ ತಳ್ಳಿಹಾಕಿದೆ.
ಹಣದ ಪ್ರಭಾವದ ಬಗ್ಗೆ ಎಚ್ಚರಿಕೆ
ಇನ್ನೊಂದೆಡೆ, ಈ ವರದಿ ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಗಂಭೀರ ಎಚ್ಚರಿಕೆಯನ್ನು ನೀಡಿದೆ. ಶೇಕಡಾ 49.55 ರಷ್ಟು ಜನರು ಹಣದ ಪ್ರಭಾವ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಶೇಕಡಾ 16.33 ರಷ್ಟು ಜನರಿಗೆ ಮತಕ್ಕೆ ಬದಲಾಗಿ ಲಂಚ ನೀಡಲು ಪ್ರಯತ್ನಿಸಲಾಗಿದೆ ಎಂಬುದೂ ವರದಿಯಲ್ಲಿ ಉಲ್ಲೇಖವಾಗಿದೆ. ಸಮೀಕ್ಷೆಯಲ್ಲಿ ಮಹಿಳೆಯರ ಪಾಲು ಶೇಕಡಾ 50ರಷ್ಟಿದ್ದು, ಅವರಲ್ಲಿ 51.64% ಮಹಿಳೆಯರು ತಮ್ಮ ಮತವನ್ನು ತಾವೇ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಾರೆ, ಈ ಸರ್ಕಾರಿ ವರದಿ ‘ಮತ ಕಳ್ಳತನ’ ಮತ್ತು ‘EVM ಅಕ್ರಮ’ ಎಂಬ ಆರೋಪಗಳಿಗೆ ಭಾರೀ ತಿರುಗೇಟು ನೀಡಿದೆ.
