ಬೆಂಗಳೂರು (ಮಾ.13): ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಡುಗೆ ಅನಿಲ (LPG) ಕೊರತೆ ಉಂಟಾಗಬಹುದು ಎಂಬ ಆತಂಕ ಜನರಲ್ಲಿ ಹೆಚ್ಚಾಗಿತ್ತು. ಹೋಟೆಲ್‌ಗಳು, ಶಾಲೆ-ಕಾಲೇಜುಗಳ ಕ್ಯಾಂಟೀನ್‌ಗಳು, ದೇವಾಲಯಗಳ ದಾಸೋಹ ಭವನಗಳು, ಇಂದಿರಾ ಕ್ಯಾಂಟೀನ್‌ಗಳು ಹಾಗೂ ಐಟಿ ಕಂಪನಿಗಳ ಕ್ಯಾಂಟೀನ್‌ಗಳಲ್ಲಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆಗಳು ಎದುರಾದ ಹಿನ್ನೆಲೆ ಸಾಮಾನ್ಯ ಜನರು ಕೂಡ ಗಾಬರಿಯಾಗಿದ್ದರು. ಆದರೆ ಇದೀಗ ಈ ಎಲ್ಲಾ ಗೊಂದಲಗಳಿಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಗೃಹ ಬಳಕೆಯ LPG ಸಿಲಿಂಡರ್‌ಗಳ ಕೊರತೆ ಇಲ್ಲ ಎಂದು ಅಧಿಕೃತವಾಗಿ ತಿಳಿಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದೆ. ಕೆಲವೆಡೆ ಉಂಟಾದ ತಾತ್ಕಾಲಿಕ ತಾಂತ್ರಿಕ ಸಮಸ್ಯೆಗಳನ್ನು ರಾಜ್ಯ ಮಟ್ಟದ ಕೊರತೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸಚಿವ ಮುನಿಯಪ್ಪ ನೇತೃತ್ವದಲ್ಲಿ ಮಹತ್ವದ ಸಭೆ
ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ ಪೆಟ್ರೋಲಿಯಂ (BPC), ಹಿಂದೂಸ್ತಾನ್ ಪೆಟ್ರೋಲಿಯಂ (HPC) ಹಾಗೂ ಗೈಲ್ (GAIL) ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ತೈಲ ಕಂಪನಿಗಳ ಪ್ರತಿನಿಧಿಗಳು ರಾಜ್ಯದಲ್ಲಿ LPG ಸಿಲಿಂಡರ್‌ಗಳ ಲಭ್ಯತೆ ಕುರಿತು ವಿವರವಾದ ಮಾಹಿತಿ ನೀಡಿದರು. ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್ ಹಾಗೂ ದಿವ್ಯ ಸೇರಿದಂತೆ ಹಲವು ತಜ್ಞರು ಪೂರೈಕೆಯ ಸ್ಥಿತಿ ಕುರಿತು ಸಚಿವರಿಗೆ ವಿವರಿಸಿ, ಯಾವುದೇ ದೊಡ್ಡ ಮಟ್ಟದ ಕೊರತೆ ಇಲ್ಲ ಎಂಬ ಭರವಸೆ ನೀಡಿದರು.
ಯುದ್ಧದ ಬಿಸಿ ಇದ್ದರೂ ಪೂರೈಕೆ ಸುಗಮ
ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಪೂರೈಕೆ ಸರಪಳಿಯಲ್ಲಿ ಕೆಲವು ಅಡಚಣೆಗಳು ಉಂಟಾಗಿರುವುದು ಸತ್ಯ. ಆದರೆ ಅದರ ಪರಿಣಾಮ ಭಾರತದಲ್ಲಿ ಗೃಹ ಬಳಕೆಯ LPG ಪೂರೈಕೆಯ ಮೇಲೆ ತೀವ್ರವಾಗಿ ಬೀಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿಯೂ ಗೃಹ ಬಳಕೆಯ LPG ಸಿಲಿಂಡರ್‌ಗಳ ದಾಸ್ತಾನು ಸಮರ್ಪಕವಾಗಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ತೈಲ ಕಂಪನಿಗಳು ಸರ್ಕಾರಕ್ಕೆ ಭರವಸೆ ನೀಡಿವೆ. ಆದ್ದರಿಂದ ಸಾರ್ವಜನಿಕರು ಗ್ಯಾಸ್ ಕೊರತೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅನಗತ್ಯ ಬುಕಿಂಗ್ ಮಾಡಬೇಡಿ: ಸರ್ಕಾರ ಮನವಿ
ಗ್ಯಾಸ್ ಕೊರತೆ ಉಂಟಾಗಬಹುದು ಎಂಬ ಭೀತಿಯಿಂದ ಕೆಲ ಗ್ರಾಹಕರು ಮುನ್ನೆಚ್ಚರಿಕೆ ಕ್ರಮವಾಗಿ ಅಥವಾ ಗಾಬರಿಯಿಂದ ಅನಗತ್ಯವಾಗಿ LPG ಸಿಲಿಂಡರ್‌ಗಳನ್ನು ಬುಕ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಮಾರುಕಟ್ಟೆಯಲ್ಲಿ ಕೃತಕ ಬೇಡಿಕೆ ಉಂಟಾಗಿ, ಪೂರೈಕೆ ವ್ಯವಸ್ಥೆಯಲ್ಲಿ ತಾತ್ಕಾಲಿಕ ಒತ್ತಡ ಸೃಷ್ಟಿಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಗ್ರಾಹಕರು ತುರ್ತು ಅವಶ್ಯಕತೆ ಇದ್ದಾಗ ಮಾತ್ರ ಸಿಲಿಂಡರ್ ಬುಕ್ ಮಾಡಬೇಕು ಎಂದು ಸರ್ಕಾರ ಮನವಿ ಮಾಡಿದೆ. ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡುವುದನ್ನು ತಪ್ಪಿಸುವ ಮೂಲಕ ಮಾರುಕಟ್ಟೆಯಲ್ಲಿ ಸಮತೋಲನ ಕಾಪಾಡಲು ಸಹಕರಿಸಬೇಕು ಎಂದು ಆಹಾರ ಇಲಾಖೆ ತಿಳಿಸಿದೆ.
ಅಗತ್ಯ ಸೇವೆಗಳಿಗೆ ಮೊದಲ ಆದ್ಯತೆ
ರಾಜ್ಯ ಸರ್ಕಾರ ಅಗತ್ಯ ಸೇವೆಗಳಿಗಾಗಿ LPG ಪೂರೈಕೆಗೆ ವಿಶೇಷ ಆದ್ಯತೆ ನೀಡಲು ತೈಲ ಕಂಪನಿಗಳಿಗೆ ಸೂಚನೆ ನೀಡಿದೆ. ಸಾರ್ವಜನಿಕ ಆಸ್ಪತ್ರೆಗಳು, ವಿದ್ಯಾರ್ಥಿನಿಲಯಗಳು, ಅಂಗನವಾಡಿಗಳು, ಶಾಲೆ-ಕಾಲೇಜುಗಳು ಹಾಗೂ ಕಾರಾಗೃಹಗಳಂತಹ ಸಂಸ್ಥೆಗಳಿಗೆ ಯಾವುದೇ ಅಡಚಣೆ ಇಲ್ಲದೆ ಗ್ಯಾಸ್ ಪೂರೈಕೆ ಮುಂದುವರಿಯಲಿದೆ.
ವಾಣಿಜ್ಯ ಬಳಕೆಯ LPG ಪೂರೈಕೆಯಲ್ಲಿ ಕೆಲವೆಡೆ ಸಣ್ಣಪುಟ್ಟ ತೊಂದರೆಗಳು ಕಂಡುಬಂದರೂ, ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಳಸಂತೆಗೆ ಬ್ರೇಕ್: ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್
ಗ್ಯಾಸ್ ಕೊರತೆಯ ಸುಳ್ಳು ಸುದ್ದಿ ಹಬ್ಬಿಸುವುದು ಅಥವಾ LPG ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಅಕ್ರಮ ರೀಫಿಲಿಂಗ್, ಅಕ್ರಮ ಸಾಗಾಣಿಕೆ ಅಥವಾ ಸಿಲಿಂಡರ್‌ಗಳ ದಾಸ್ತಾನು ಪತ್ತೆಯಾದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
