ವಂದೇ ಮಾತರಂ ಗೀತೆ: ಕೇಂದ್ರದಲ್ಲಿ 6 ಚರಣ, ರಾಜ್ಯದಲ್ಲಿ 2 ಚರಣ

Untitled design (72)

ಬೆಂಗಳೂರು ಸೆ. 10: ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ‘ವಂದೇ ಮಾತರಂ’ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಏಕರೂಪತೆ ಮತ್ತು ಸೂಕ್ತ ಶಿಷ್ಟಾಚಾರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರ ವಂದೇ ಮಾತರಂ ಆರು ಚರಣ ಹಾಡುವುದು ಕಡ್ಡಾಯ ಎಂದು ತಿಳಿಸಿದೆ ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದು ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೇವಲ ಎರಡು ಚರಣ ವಂದೇ ಮಾತರಂ ಹಾಡುವಂತೆ ಆದೇಶ ನೀಡಿದೆ.

ಸರ್ಕಾರದ ಆದೇಶದಲ್ಲೇನಿದೆ?

ಭಾರತದ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ದೇಶದ ಜನರಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವಲ್ಲಿ ‘ವಂದೇ ಮಾತರಂ’ ಗೀತೆ ಮಹತ್ವದ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ‘ವಂದೇ ಮಾತರಂ’ ಗೀತೆಯ ಅಧಿಕೃತ ಆವೃತ್ತಿ ಹಾಗೂ ವಿವಿಧ ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅದರ ಗಾಯನ ಅಥವಾ ವಾದನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ‘ವಂದೇ ಮಾತರಂ’ ಗೀತೆಯ ವಾದನ ಮತ್ತು ಸಾಮೂಹಿಕ ಗಾಯನಕ್ಕೆ ಸಂಬಂಧಿಸಿದ ಸಂದರ್ಭಗಳನ್ನು ಪ್ರತ್ಯೇಕವಾಗಿ ನಿರ್ದಿಷ್ಟಪಡಿಸಲಾಗಿದೆ. ರಾಜ್ಯದಲ್ಲಿಯೂ ಸರ್ಕಾರಿ ಕಾರ್ಯಕ್ರಮಗಳ ಸ್ವರೂಪ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಗೀತೆಯ ಗಾಯನದಲ್ಲಿ ಏಕರೂಪತೆ, ಗೌರವ ಮತ್ತು ಸೂಕ್ತ ಶಿಷ್ಟಾಚಾರವನ್ನು ಪಾಲಿಸುವ ಅಗತ್ಯವಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದ ತೀರ್ಮಾನದಂತೆ ರಾಜ್ಯದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ‘ವಂದೇ ಮಾತರಂ’ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಲಾಗಿದೆ.

ಗಣ್ಯರು ಉಪಸ್ಥಿತರಿದ್ದರೆ 6 ಚರಣ

ರಾಜ್ಯ ಸರ್ಕಾರದ ಸಾಮಾನ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆದರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಆರು ಚರಣಗಳ ಗಾಯನಕ್ಕೆ ಅವಕಾಶ ನೀಡಲಾಗಿದೆ.

ಹೀಗಾಗಿ ಸಾಮಾನ್ಯ ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ಎರಡು ಚರಣಗಳಿಗೆ ಸೀಮಿತಗೊಳಿಸಲಾಗಿದ್ದು, ದೇಶದ ಪ್ರಮುಖ ಗಣ್ಯರು ಭಾಗವಹಿಸುವ ವಿಶೇಷ ಕಾರ್ಯಕ್ರಮಗಳಲ್ಲಿ ಆರು ಚರಣಗಳನ್ನು ಹಾಡಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಸರ್ಕಾರದ ಈ ಆದೇಶವು ‘ವಂದೇ ಮಾತರಂ’ ಗಾಯನಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳ ಸ್ವರೂಪ ಮತ್ತು ಗಣ್ಯರ ಉಪಸ್ಥಿತಿಯನ್ನು ಆಧರಿಸಿ ವಿಭಿನ್ನ ನಿಯಮವನ್ನು ನಿಗದಿಪಡಿಸಿದೆ.

Exit mobile version