ಬೆಂಗಳೂರು: ಸರ್ಕಾರಿ ಸ್ವಾಧೀನದಲ್ಲಿರುವ ಭವನಗಳು, ಆವರಣಗಳು ಮತ್ತು ಇತರ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸೇರಿದಂತೆ ಎಲ್ಲಾ ಖಾಸಗಿ ಸಂಘಟನೆಗಳು ಕಾರ್ಯಕ್ರಮಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕರ್ನಾಟಕ ಸರ್ಕಾರ ಕಡ್ಡಾಯಗೊಳಿಸಿದೆ. ಈ ಆದೇಶದಲ್ಲಿ ನೇರವಾಗಿ RSS ಅನ್ನು ಹೆಸರಿಸದಿದ್ದರೂ, ‘ಯಾವುದೇ ಖಾಸಗಿ ಸಂಘಟನೆ’ ಎಂಬ ವ್ಯಾಪಕ ವರ್ಗೀಕರಣದ ಮೂಲಕ ಸಂಘ ಮತ್ತು ಅದರ ಸಹವರ್ತಿ ಸಂಸ್ಥೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶ ಸ್ಪಷ್ಟವಾಗಿದೆ.
ಈ ನಿರ್ಣಯವು ತಮಿಳುನಾಡು ಸರ್ಕಾರದ ನೀತಿಯನ್ನು ಅನುಸರಿಸಿದಂತಿದೆ. ಸರ್ಕಾರಿ ಜಾಗಗಳಲ್ಲಿ RSS ನಡೆಸಿಕೊಂಡು ಬಂದ ಬೈಠಕ್, ಪಥಸಂಚಲನೆ, ಶಿಬಿರಗಳಂಥ ಕಾರ್ಯಕ್ರಮಗಳನ್ನು ಇನ್ನು ಮೇಲೆ ಅನುಮತಿ ಇಲ್ಲದೆ ನಡೆಸಲು ಸಾಧ್ಯವಿರುವುದಿಲ್ಲ. ಸಂಬಂಧಿತ ಸರ್ಕಾರಿ ಇಲಾಖೆ ಅಥವಾ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯಬೇಕಾಗುವುದರಿಂದ, ಸಂಘಟನೆಗಳ ಚಟುವಟಿಕೆಗಳ ಮೇಲೆ ಸರ್ಕಾರಕ್ಕೆ ಪೂರ್ಣ ಮೇಲ್ವಿಚಾರಣೆ ಸಾಧ್ಯವಾಗಲಿದೆ.
ರಾಜ್ಯದಲ್ಲಿ ಸಂಘಪರಿವಾರದ ವಿರುದ್ಧ ರಾಜಕೀಯ ವಿರೋಧವಿರುವ ಪರಿಸ್ಥಿತಿಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಸರ್ಕಾರಿ ನೌಕರರು ಸಂಘ ಅಥವಾ ಅದರ ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂಬುದಕ್ಕೆ ಸಂಬಂಧಿಸಿ ಇದೇ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಆ ಸುದ್ದಿ ಇನ್ನೂ ತಣ್ಣಗಾಗುವುದರೊಳಗೇ, ಈಗ ಸರ್ಕಾರಿ ಸ್ಥಳಗಳ ಬಳಕೆಯನ್ನು ನಿಯಂತ್ರಿಸುವ ಈ ವ್ಯಾಪಕ ಆದೇಶ ಬಂದಿದೆ.
ಸರ್ಕಾರಿ ಆದೇಶದ ಪ್ರಕಾರ, ಯಾವುದೇ ಖಾಸಗಿ ಸಂಘಟನೆ, ಸಂಸ್ಥೆ, ಟ್ರಸ್ಟ್, ವ್ಯಕ್ತಿ ಅಥವಾ ಗುಂಪು ಸರ್ಕಾರಿ ಸ್ವಾಧೀನದ ಸ್ಥಳಗಳಲ್ಲಿ ಸಭೆ, ಸಮಾರಂಭ, ಕಾರ್ಯಕ್ರಮ ಅಥವಾ ಯಾವುದೇ ರೀತಿಯ ಚಟುವಟಿಕೆ ನಡೆಸಲು ಬಯಸಿದರೆ, ಅದಕ್ಕೆ ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರದಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯಬೇಕು. ಈ ನಿಯಮವನ್ನು ಮೀರಿದರೆ ಕಾನೂನುಬದ್ಧ ಕ್ರಮ ಜರುಗುವುದಾಗಿಯೂ ಸರ್ಕಾರ ಹೇಳಿದೆ.