‘ಮಂಜುಮ್ಮಲ್ ಬಾಯ್ಸ್’ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

Untitled design 2026 03 02T220348.718

ಕೊಚ್ಚಿ (ಮಾ.2): ಭರ್ಜರಿ ಯಶಸ್ಸು ಕಂಡ ‘ಮಂಜುಮ್ಮಲ್ ಬಾಯ್ಸ್’ (Manjummel Boys) ಚಿತ್ರದ ನಿರ್ದೇಶಕ ಚಿದಂಬರಂ ಅವರಿಗೆ ಬಿಗ್ ಶಾಕ್ ಎದುರಾಗಿದೆ. ನಟಿಯೊಬ್ಬರು ನೀಡಿದ ಲೈಂಗಿಕ ಕಿರುಕುಳದ ದೂರಿನ ಮೇರೆಗೆ ಕೇರಳ ಪೊಲೀಸರು ಚಿದಂಬರಂ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಘಟನೆ ಎರಡು ವರ್ಷಗಳ ಹಿಂದೆ ನಡೆದಿದ್ದು, 2022ರಲ್ಲಿ ಎರ್ನಾಕುಲಂನಲ್ಲಿರುವ ತನ್ನ ಫ್ಲಾಟ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ನಿರ್ದೇಶಕರು ಲೈಂಗಿಕ ದುರುದ್ದೇಶದಿಂದ ತನ್ನ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಿ, ದೈಹಿಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪದ ವಿವರ ಏನು?

ನಟಿಯ ಹೇಳಿಕೆ ಪ್ರಕಾರ, 2022ರಲ್ಲಿ ಚಿದಂಬರಂ ಅವರು ತನ್ನ ಫ್ಲಾಟ್‌ಗೆ ಬಲವಂತವಾಗಿ ನುಗ್ಗಿ, ಮಹಿಳೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದಾರೆ. ತನ್ನ ಅನುಮತಿಯಿಲ್ಲದೆ ಮನೆಯೊಳಗೆ ಪ್ರವೇಶಿಸಿ, ಶಾರೀರಿಕವಾಗಿ ಅಸಭ್ಯ ವರ್ತನೆ ತೋರಿದ್ದಾರೆ ಎಂದು ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಘಟನೆ ಆ ಸಮಯದಲ್ಲಿ ಬಹಿರಂಗವಾಗದಿದ್ದರೂ, ಈಗ ಧೈರ್ಯವಾಗಿ ಮುಂದೆ ಬಂದು ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಘನತೆಗೆ ಭಂಗ ತರುವ ಉದ್ದೇಶದಿಂದ ನಡೆಸಿದ ದಾಳಿ ಸಂಬಂಧ ಸೆಕ್ಷನ್ 74 ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಸೆಕ್ಷನ್ 75 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಪ್ರಾಥಮಿಕ ತನಿಖೆ ಪ್ರಾರಂಭಗೊಂಡಿದ್ದು, ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ.

ಪೊಲೀಸರ ಹೇಳಿಕೆ

ಪೊಲೀಸ್ ಅಧಿಕಾರಿಗಳ ಪ್ರಕಾರ, “ನಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಮುಂದಿನ ಕ್ರಮಗಳು ಪ್ರಾಥಮಿಕ ತನಿಖೆ ಮತ್ತು ಅಗತ್ಯ ಪರಿಶೀಲನೆಗಳ ನಂತರ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಸಾಕ್ಷ್ಯಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಪರಿಶೀಲಿಸಿ ನಂತರವೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಚಿದಂಬರಂ ಅವರ ಬಂಧನ ಕುರಿತಾಗಿ ಅಧಿಕೃತ ಮಾಹಿತಿ ಹೊರಬಂದಿಲ್ಲ.

‘ಮಂಜುಮ್ಮಲ್ ಬಾಯ್ಸ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಚಿದಂಬರಂ ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಿರ್ದೇಶಕರಾಗಿ ಹೊರಹೊಮ್ಮಿದ್ದರು. ಅವರ ವಿಭಿನ್ನ ಕಥಾನಕ ಮತ್ತು ತಾಂತ್ರಿಕ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.  ಪ್ರಸ್ತುತ ಚಿದಂಬರಂ ಅವರು ‘ಬಾಲನ್’ ಎಂಬ ಹೊಸ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಕಥೆಯನ್ನು ಜಿತು ಮಾಧವನ್ ರಚಿಸಿದ್ದಾರೆ ಎನ್ನಲಾಗಿದೆ.

Exit mobile version