ಬೆಂಗಳೂರು: ಆನ್‌ಲೈನ್ ಶಾಪಿಂಗ್ ಮತ್ತು ಕ್ವಿಕ್ ಕಾಮರ್ಸ್ ವೇದಿಕೆಗಳ ಮೂಲಕ ಅತ್ಯಂತ ವಿಷಕಾರಿ ಸ್ವಭಾವ ಹೊಂದಿರುವ ‘ದತ್ತೂರಿ’ ಹಣ್ಣು ಹಾಗೂ ಬೀಜಗಳನ್ನು ಆಹಾರ ಪದಾರ್ಥಗಳ ರೀತಿಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹಾಗೂ ಬಿಗ್‌ಬಾಸ್ಕೆಟ್ ಸಂಸ್ಥೆಗಳ ಆಹಾರ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ಮಾನವನ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದಾದ ದತ್ತೂರಿ ಹಣ್ಣು ಮತ್ತು ಬೀಜಗಳು ಆನ್‌ಲೈನ್ ವೇದಿಕೆಗಳಲ್ಲಿ ಗ್ರಾಹಕರಿಗೆ ಲಭ್ಯವಿವೆ ಎಂಬ ದೂರುಗಳು ಇಲಾಖೆಗೆ ಬಂದಿದ್ದವು. ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ತನಿಖೆ ಆರಂಭಿಸಿದ್ದರು. ಈ ವೇಳೆ ಕೆಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ದತ್ತೂರಿ ಉತ್ಪನ್ನಗಳನ್ನು ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.
ತನಿಖೆಯ ವೇಳೆ ಮತ್ತೊಂದು ಗಂಭೀರ ಸಂಗತಿಯೂ ಬೆಳಕಿಗೆ ಬಂದಿದೆ. ಈ ಉತ್ಪನ್ನಗಳನ್ನು ಸಂಸ್ಥೆಗಳ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದ್ದು, ಅವುಗಳ ಪ್ಯಾಕೇಜಿಂಗ್ ಅಥವಾ ಪಟ್ಟಿಗಳಲ್ಲಿ FSSAI ನೋಂದಣಿ ಸಂಖ್ಯೆಗಳನ್ನೂ ಬಳಸಲಾಗಿತ್ತು ಎನ್ನಲಾಗಿದೆ. ಆಹಾರ ಸುರಕ್ಷತಾ ನಿಯಮಗಳಿಗೆ ವಿರುದ್ಧವಾಗಿ ಇಂತಹ ಅಪಾಯಕಾರಿ ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸಿರುವ ಆರೋಪದ ಹಿನ್ನೆಲೆ ಇಲಾಖೆ ಸಂಸ್ಥೆಗಳಿಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು.
ಅಧಿಕಾರಿಗಳ ಪ್ರಕಾರ, ನೋಟಿಸ್‌ಗೆ ಅಮೆಜಾನ್ ಕಡೆಯಿಂದ ಸಮರ್ಪಕ ಉತ್ತರ ಬಂದಿರಲಿಲ್ಲ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹೆಚ್ಚುವರಿ ಸಮಯಾವಕಾಶ ಕೋರಿತ್ತು. ಮತ್ತೊಂದೆಡೆ, ಬಿಗ್‌ಬಾಸ್ಕೆಟ್ ತನ್ನ ವೇದಿಕೆಯಲ್ಲಿ ಇಂತಹ ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿತ್ತು. ಆದರೆ ಸಂಸ್ಥೆಗಳು ನೀಡಿದ ವಿವರಣೆಗಳು ಇಲಾಖೆಗೆ ತೃಪ್ತಿಕರವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಸಂಬಂಧಪಟ್ಟ ಸಂಸ್ಥೆಗಳ ಆಹಾರ ಪರವಾನಗಿಗಳನ್ನು ಅಮಾನತುಗೊಳಿಸುವ ಆದೇಶ ಹೊರಡಿಸಿದೆ. ಇದರೊಂದಿಗೆ ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಪೂರೈಸುತ್ತಿದ್ದ ಕೆಲವು ಸರಬರಾಜುದಾರರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದ್ದು, ಅವರ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.
ಅಷ್ಟೇ ಅಲ್ಲದೆ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ದತ್ತೂರಿಗೆ ಸಂಬಂಧಿಸಿದ ಜಾಹೀರಾತುಗಳು, ಉತ್ಪನ್ನ ಪಟ್ಟಿಗಳು ಮತ್ತು ಮಾರಾಟ ಲಿಂಕ್‌ಗಳನ್ನು ತಕ್ಷಣ ತೆಗೆದುಹಾಕುವಂತೆ ಇಲಾಖೆ ಸೂಚಿಸಿದೆ. ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದತ್ತೂರಿ ಸಸ್ಯದ ಕೆಲವು ಭಾಗಗಳಲ್ಲಿ ವಿಷಕಾರಿ ರಾಸಾಯನಿಕ ಸಂಯುಕ್ತಗಳು ಕಂಡುಬರುತ್ತವೆ. ಇವುಗಳನ್ನು ತಪ್ಪಾಗಿ ಸೇವಿಸಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ, ಇಂತಹ ಪದಾರ್ಥಗಳ ಮಾರಾಟ ಮತ್ತು ಬಳಕೆಯಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದೆ.
