ನಕಲಿ PhD ಹಗರಣ ಬಯಲು: 249 ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್!

ಶಿ (4)

ಬೆಂಗಳೂರು, ಜುಲೈ (24) : ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ (PhD) ಪ್ರಮಾಣಪತ್ರಗಳನ್ನು ಸಲ್ಲಿಸಿ ನೇಮಕಾತಿ ಪಡೆದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.

ಈ ಕುರಿತು ಜುಲೈ 21ರಂದು ಆದೇಶ ಹೊರಡಿಸಿರುವ ಆಯುಕ್ತರು, ಸಂಬಂಧಿತ ಕಾಲೇಜುಗಳ ಪ್ರಾಂಶುಪಾಲರು ತಕ್ಷಣವೇ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ, ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಜೊತೆಗೆ, ನಕಲಿ ದಾಖಲೆ ಸಲ್ಲಿಸಿರುವುದು ದೃಢಪಟ್ಟ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಿ, ಭವಿಷ್ಯದ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸುವಂತೆ ಸೂಚಿಸಲಾಗಿದೆ.

ಸಾಮಾನ್ಯವಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿ ನೇಮಕಾತಿ ಆದೇಶ ನೀಡಲಾಗುತ್ತದೆ. ನಂತರ ಪ್ರಮಾಣಪತ್ರಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗುತ್ತದೆ. ಈ ಪರಿಶೀಲನೆ ವೇಳೆ 249 ಅಭ್ಯರ್ಥಿಗಳು ಸಲ್ಲಿಸಿದ್ದ ಪಿಎಚ್‌ಡಿ ಪ್ರಮಾಣಪತ್ರಗಳು ಅಸಲಿಯಲ್ಲ ಎಂಬುದನ್ನು ವಿವಿಧ ವಿಶ್ವವಿದ್ಯಾಲಯಗಳು ದೃಢಪಡಿಸಿರುವುದಾಗಿ ವರದಿಗಳು ತಿಳಿಸಿವೆ.

ಒಟ್ಟು 249 ಪ್ರಕರಣಗಳ ಪೈಕಿ 148 ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪತ್ತೆಯಾಗಿರುವುದು ವಿಶೇಷ ಗಮನ ಸೆಳೆದಿದೆ. ಜಿಲ್ಲಾವಾರು ಪರಿಶೀಲಿಸಿದರೆ ಕಲಬುರಗಿಯಲ್ಲಿ 33, ಯಾದಗಿರಿಯಲ್ಲಿ 31, ಬೀದರ್‌ನಲ್ಲಿ 28, ರಾಯಚೂರಿನಲ್ಲಿ 24, ಕೊಪ್ಪಳದಲ್ಲಿ 13, ವಿಜಯನಗರದಲ್ಲಿ 9 ಹಾಗೂ ಬಳ್ಳಾರಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

ಬೀದರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 19 ಮಂದಿ, ಕಲಬುರಗಿಯ ಸೇಡಂ ರಸ್ತೆಯ ಸ್ವಾಯತ್ತ ಸರ್ಕಾರಿ ಕಾಲೇಜಿನಲ್ಲಿ 17 ಮಂದಿ ಹಾಗೂ ಕಲಬುರಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 15 ಮಂದಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿರುವುದು ಪತ್ತೆಯಾಗಿದೆ.

ಆದರೆ ಕೆಲವು ಕಾಲೇಜುಗಳ ಪ್ರಾಂಶುಪಾಲರು ಎಂಟು ಅಭ್ಯರ್ಥಿಗಳ ಪ್ರಮಾಣಪತ್ರಗಳು ಅಸಲಿಯಾಗಿವೆ ಎಂಬ ಟಿಪ್ಪಣಿ ನೀಡಿರುವ ಹಿನ್ನೆಲೆ, ಆ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಇಲಾಖೆಯು ಸೂಚಿಸಿದೆ. ಈ ಬೆಳವಣಿಗೆ ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ದಾಖಲೆಗಳ ಪರಿಶೀಲನಾ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.

Exit mobile version