ಬೆಂಗಳೂರು, ಮೇ 12: ಕರ್ನಾಟಕ ಸರ್ಕಾರವು ಮೇ 11 ರಿಂದ ಹೊಸ ಅಬಕಾರಿ ನೀತಿಯನ್ನು ಜಾರಿಗೊಳಿಸಿದೆ.. ಮೇ 11ರಿಂದ ಅಧಿಕೃತವಾಗಿ ಜಾರಿಗೆ ಬಂದಿರುವ ಈ ಹೊಸ ನೀತಿಯಡಿಯಲ್ಲಿ, ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲಾಗಿದೆ. ದಶಕಗಳ ಕಾಲ ಅನುಸರಿಸಲಾಗುತ್ತಿದ್ದ ಹಳೆಯ ತೆರಿಗೆ ಮಾದರಿಯನ್ನು ಕೈಬಿಟ್ಟು, ಇನ್ನು ಮುಂದೆ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆ ಜಾರಿಯಾಗಲಿದೆ.
ಈ ಹೊಸ ಮಾದರಿಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದ್ದರೂ, ಸಾಮಾನ್ಯ ಜನರು ಬಳಸುವ ಕಡಿಮೆ ಬೆಲೆಯ ಮದ್ಯದ ದರ ಹೆಚ್ಚಳವಾಗುತ್ತಿರುವುದು ತೀವ್ರ ಟೀಕೆಗೆ ಕಾರಣವಾಗಿದೆ. ಮತ್ತೊಂದೆಡೆ, ಪ್ರೀಮಿಯಂ ಹಾಗೂ ವಿದೇಶಿ ಮದ್ಯದ ದರ ಇಳಿಕೆಯಾಗುತ್ತಿರುವುದು ಶ್ರೀಮಂತರಿಗೆ ಅನುಕೂಲಕರ ನಿರ್ಧಾರ ಎನ್ನಲಾಗುತ್ತಿದೆ.
16 ಸ್ಲ್ಯಾಬ್‌ಗಳಿಂದ 8 ಸ್ಲ್ಯಾಬ್‌ಗಳಿಗೆ ಇಳಿಕೆ
ಹೊಸ ಅಬಕಾರಿ ನೀತಿಯಡಿ ಸರ್ಕಾರವು ಹಿಂದಿನ 16 ತೆರಿಗೆ ಸ್ಲ್ಯಾಬ್‌ಗಳ ವ್ಯವಸ್ಥೆಯನ್ನು 8 ಸ್ಲ್ಯಾಬ್‌ಗಳಿಗೆ ಇಳಿಸಿದೆ. ಸರ್ಕಾರದ ಪ್ರಕಾರ, ಇದು ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶದಿಂದ ಕೈಗೊಂಡ ಕ್ರಮವಾಗಿದೆ. ಆದರೆ ಈ ಬದಲಾವಣೆಯ ನೇರ ಪರಿಣಾಮ ಸಾಮಾನ್ಯ ಬ್ರಾಂಡ್‌ಗಳ ಮದ್ಯದ ಬೆಲೆಯಲ್ಲಿ ಕಾಣಿಸಿಕೊಳ್ಳುತ್ತಿದೆ.
ಕಡಿಮೆ ದರದ ವಿಸ್ಕಿ, ಬ್ರಾಂಡಿ, ರಮ್ ಹಾಗೂ ವೋಡ್ಕಾ ಬೆಲೆಯಲ್ಲಿ ಶೇ 20ರಿಂದ 30ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಜನಸಾಮಾನ್ಯರು ಹೆಚ್ಚಾಗಿ ಖರೀದಿಸುವ 180 ಮಿ.ಲೀ ಕ್ವಾರ್ಟರ್ ಬಾಟಲ್ ಮತ್ತು ಟೆಟ್ರಾ ಪ್ಯಾಕ್‌ಗಳ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ.
₹63ರಿಂದ ₹105ಕ್ಕೆ ಕ್ವಾರ್ಟರ್ ಬೆಲೆ?
ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ (KBDA) ಮಾಹಿತಿ ಪ್ರಕಾರ, ಮೊದಲ ಐದು ಸ್ಲ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಸರ್ಕಾರವು ಶೇ 20ರಿಂದ 30ರಷ್ಟು ಹೆಚ್ಚಿಸಿದೆ. ಕಳೆದ ವರ್ಷ ₹63 ಇದ್ದ ಕೆಲವು ಕ್ವಾರ್ಟರ್ ಮದ್ಯದ ಬೆಲೆ ಈಗಾಗಲೇ ₹80ಕ್ಕೆ ಏರಿಕೆಯಾಗಿತ್ತು. ಇದೀಗ ಹೊಸ ತೆರಿಗೆ ವ್ಯವಸ್ಥೆಯ ನಂತರ ಅದೇ ಬಾಟಲ್ ₹105ರವರೆಗೆ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರೀಮಿಯಂ ಮದ್ಯಕ್ಕೆ ಭಾರಿ ರಿಯಾಯಿತಿ
ಇನ್ನೊಂದೆಡೆ, ದುಬಾರಿ ಹಾಗೂ ವಿದೇಶಿ ಬ್ರಾಂಡ್ ಮದ್ಯದ ಮೇಲಿನ ತೆರಿಗೆ ಕಡಿತ ಮಾಡಲಾಗಿದೆ. ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್, ಯುನೈಟೆಡ್ ಸ್ಪಿರಿಟ್ಸ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಪ್ರೀಮಿಯಂ ಬ್ರಾಂಡ್‌ಗಳು 6ರಿಂದ 8ನೇ ಸ್ಲ್ಯಾಬ್‌ಗೆ ಸೇರಿವೆ.
ಈ ವಿಭಾಗದ ಮದ್ಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಸರ್ಕಾರವು ಶೇ 10ರಿಂದ 15ರಷ್ಟು ಕಡಿಮೆ ಮಾಡಿರುವುದರಿಂದ, ಅವುಗಳ ದರ ಶೇ 16ರಿಂದ 20ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಇದರಿಂದ ದುಬಾರಿ ಮದ್ಯ ಸೇವಿಸುವ ವರ್ಗಕ್ಕೆ ಲಾಭವಾಗಲಿದೆ.
ಸರ್ಕಾರದ ಉದ್ದೇಶವೇನು?
ಸರ್ಕಾರದ ಪ್ರಕಾರ, ಹೊಸ ತೆರಿಗೆ ನೀತಿಯ ಪ್ರಮುಖ ಉದ್ದೇಶ ಅಬಕಾರಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವುದರಿಂದ ಪಾರದರ್ಶಕತೆ ಹೆಚ್ಚಲಿದೆ ಎನ್ನಲಾಗಿದೆ. ಜೊತೆಗೆ ರಾಜ್ಯದ ಅಬಕಾರಿ ಆದಾಯವನ್ನು ಹೆಚ್ಚಿಸುವ ಗುರಿಯೂ ಸರ್ಕಾರ ಹೊಂದಿದೆ.
