ರೈತರಿಗೆ ಬಿಗ್ ರಿಲೀಫ್‌: ಬರಪೀಡಿತ ಪಟ್ಟಿಗೆ ಮತ್ತೆ 53 ತಾಲೂಕುಗಳ ಸೇರ್ಪಡೆ

ಅಲರ್ಟ್ (1)

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಮತ್ತಷ್ಟು ಕ್ರಮಗಳನ್ನು ಕೈಗೊಂಡಿದೆ. ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸದಾಗಿ 53 ತಾಲೂಕುಗಳನ್ನು ಸೇರಿಸಿ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ ಒಟ್ಟು 177ಕ್ಕೆ ಏರಿಕೆಯಾಗಿದೆ.

ಈ ಹೊಸ ಸೇರ್ಪಡೆಯಲ್ಲಿ 51 ತಾಲೂಕುಗಳು ತೀವ್ರ ಬರಪೀಡಿತ ಪ್ರದೇಶಗಳಾಗಿದ್ದು, 2 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಇದರೊಂದಿಗೆ ಗದಗ ಜಿಲ್ಲೆಯ ಮೂರು ತಾಲೂಕುಗಳು ಸೇರಿದಂತೆ ಒಟ್ಟು 11 ತಾಲೂಕುಗಳ ಬರ ಪರಿಸ್ಥಿತಿಯ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡುವಂತೆ ಸರ್ಕಾರ ಆದೇಶಿಸಿದೆ.

ಶಾಸಕರ ಬೆದರಿಕೆಗೆ ಮಣಿದ ಸರ್ಕಾರ?

ಗದಗ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೆಚ್.ಕೆ. ಪಾಟೀಲ್ ಅವರು ಬೆದರಿಕೆ ಹಾಕಿದ್ದರು. ಅವರ ಒತ್ತಾಯಕ್ಕೆ ಮಣಿದ ಸರ್ಕಾರ, 11 ತಾಲೂಕುಗಳ ಬರ ಪರಿಸ್ಥಿತಿ ಕುರಿತು ವೈಜ್ಞಾನಿಕ ಪರಿಶೀಲನೆ, ಪಾರದರ್ಶಕ ಸಮೀಕ್ಷೆ ಮತ್ತು ನಿಖರ ವರದಿ ಪಡೆಯಲು ಸ್ಥಳ ಪರಿಶೀಲನೆಗೆ ಆದೇಶಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು, “ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿರಂತರವಾಗಿ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಲಾಗುತ್ತಿದೆ. ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಮೂರು ಹಂತಗಳಲ್ಲಿ ಬರ ಘೋಷಣೆ

ಸರ್ಕಾರ ಈವರೆಗೆ ಮೂರು ಹಂತಗಳಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ. ಮೊದಲ ಹಂತದಲ್ಲಿ 101 ತಾಲೂಕುಗಳನ್ನು, ಎರಡನೇ ಹಂತದಲ್ಲಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಮತ್ತೆ 53 ತಾಲೂಕುಗಳನ್ನು ಸೇರಿಸಿ ಆದೇಶ ಹೊರಡಿಸಲಾಗಿದೆ.

ಇದರ ಜೊತೆಗೆ, ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ 4ನೇ ಹಂತದಲ್ಲಿ 7 ಜಿಲ್ಲೆಗಳ 11 ತಾಲೂಕುಗಳು ಗ್ರೌಂಡ್ ಟ್ರೂಥಿಂಗ್‌ಗೆ ಅರ್ಹತೆ ಪಡೆದಿವೆ. ವೈಜ್ಞಾನಿಕ ಪರಿಶೀಲನೆ, ಪಾರದರ್ಶಕ ಸಮೀಕ್ಷೆ ಮತ್ತು ನಿಖರ ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.

ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲಿಯೂ ಹೆಚ್ಚುವರಿ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್‌ಗೆ ಸೇರಿಸಲಾಗುವುದು. ಬೆಳೆ ಹಾನಿಯ ನೈಜ ಚಿತ್ರಣ ಆಧರಿಸಿ, ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನಿಯಮಾನುಸಾರ ಅಗತ್ಯ ನೆರವು ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ಅಗತ್ಯ ನೆರವು ಬಿಡುಗಡೆ

ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾದ ಜನರಿಗೆ ಅಗತ್ಯ ನೆರವು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ ₹320 ಕೋಟಿ ಎಸ್‌ಡಿಆರ್‌ಎಫ್ ಹಣವನ್ನು ಬರ ಘೋಷಣೆಯ ಹಿನ್ನೆಲೆಯಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

16ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರದಿಂದ ಈ ವರ್ಷ ₹929.25 ಕೋಟಿ ಬರಬೇಕಿದ್ದು, ಈಗಾಗಲೇ ₹464.62 ಕೋಟಿ ಮೊದಲ ಕಂತು ಬಿಡುಗಡೆಯಾಗಿದೆ. ರಾಜ್ಯದ ಪಾಲು ಸೇರಿಸಿ ಜಿಲ್ಲಾಧಿಕಾರಿಗಳಿಗೆ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

Exit mobile version