ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದ ಡಿಜಿಪಿ ಡಾ. ರಾಮಚಂದ್ರ ರಾವ್ (Ramachandra Rao) ರಾಸಲೀಲೆ ಪ್ರಕರಣದಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರಿ ಕಚೇರಿಯೊಳಗೆ ಮಹಿಳೆಯೊಂದಿಗಿನ ಅಸಭ್ಯ ವರ್ತನೆ ನಡೆಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಸರ್ಕಾರ ಅವರನ್ನು ಅಮಾನತುಗೊಳಿಸಿ, ಪ್ರಕರಣದ ಸತ್ಯಾಸತ್ಯತೆ ಪತ್ತೆ ಹಚ್ಚಲು ಹೈ-ಲೆವೆಲ್ ತನಿಖೆಗೆ ಆದೇಶಿಸಿದೆ.
ಈ ತನಿಖೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದಲ್ಲಿ ನಡೆಸಲಾಗುತ್ತದೆ. ವೀಡಿಯೋಗಳ ಮೂಲ, ಘಟನೆ ನಡೆದ ಸಂದರ್ಭ ಹಾಗೂ ಅದರ ಹಿಂದಿರುವ ಕಾರಣಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದಂತೆ, ಕಚೇರಿಯೊಳಗೇ ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತನೆ ನಡೆಸಿದಂತೆ ತೋರಿಸುವ ಕೆಲ ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು.
ವೀಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಂಡು ಡಿಜಿಪಿ ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಬಳಿಕ ಪ್ರಕರಣದ ಗಂಭೀರತೆ ಹಾಗೂ ಸಾರ್ವಜನಿಕ ಪ್ರತಿಕ್ರಿಯೆಯನ್ನು ಪರಿಗಣಿಸಿ, ಸಮಗ್ರ ತನಿಖೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಡಿಜಿ ಮತ್ತು ಐಜಿಪಿಗೆ ಸ್ಪಷ್ಟ ನಿರ್ದೇಶನ ನೀಡಿದ್ದು, ಅದರಂತೆ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆಗೊಳ್ಳಲಿದೆ. ಈ ತಂಡವು ವೀಡಿಯೋಗಳ ತಾಂತ್ರಿಕ ವಿಶ್ಲೇಷಣೆ, ಅವುಗಳ ಎಡಿಟಿಂಗ್ ಆಗಿದೆಯೇ ಎಂಬ ಪರಿಶೀಲನೆ, ವಿಡಿಯೋ ಚಿತ್ರೀಕರಣಗೊಂಡ ಸ್ಥಳ ಹಾಗೂ ಕಾಲಾವಧಿ ಸೇರಿದಂತೆ ಎಲ್ಲ ಆಯಾಮಗಳನ್ನು ಪರಿಶೀಲಿಸಲಿದೆ. ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯ ವಿರುದ್ಧ ಈ ರೀತಿಯ ಗಂಭೀರ ಆರೋಪಗಳು ಕೇಳಿಬಂದಿರುವುದು ಇಲಾಖೆಗೂ ಸರ್ಕಾರಕ್ಕೂ ತೀವ್ರ ಮುಜುಗರ ಉಂಟುಮಾಡಿದೆ.
ಸರ್ಕಾರದ ಮೂಲಗಳ ಪ್ರಕಾರ, ತನಿಖೆಯ ವರದಿ ಆಧರಿಸಿ ಮುಂದಿನ ಕಾನೂನು ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆರೋಪಗಳು ಸಾಬೀತಾದಲ್ಲಿ, ರಾಮಚಂದ್ರ ರಾವ್ ವಿರುದ್ಧ ಶಿಸ್ತು ಕ್ರಮ, ಕ್ರಿಮಿನಲ್ ಪ್ರಕರಣ ಹಾಗೂ ಸೇವೆಯಿಂದ ವಜಾಗೊಳಿಸುವ ಸಾಧ್ಯತೆ ಇದೆ.
ಈ ಪ್ರಕರಣವು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
