ಇಂದು ಕೇಂದ್ರ ಬಜೆಟ್ 2026: ಕರ್ನಾಟಕದ ನಿರೀಕ್ಷೆಗಳೇನು?

Untitled design 2026 02 01T074045.179

ಹೊಸದಿಲ್ಲಿ : ಕೇಂದ್ರ ಸರ್ಕಾರದ 2026–27 ಸಾಲಿನ ಆಯವ್ಯಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಎರಡನೇ ಪೂರ್ಣ ಬಜೆಟ್ ಆಗಿದ್ದು, ದೇಶದ ಆರ್ಥಿಕ ದಿಕ್ಕು, ತೆರಿಗೆ ಸುಧಾರಣೆಗಳು, ಅಭಿವೃದ್ಧಿ ಯೋಜನೆಗಳು ಹಾಗೂ ರಾಜ್ಯಗಳಿಗೆ ಅನುದಾನ ಹಂಚಿಕೆ ಕುರಿತಾಗಿ ಮಹತ್ವದ ನಿರ್ಣಯಗಳನ್ನು ಒಳಗೊಂಡಿರಲಿದೆ.

ಈ ಬಜೆಟ್ ಮೇಲೆ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಜನಸಾಮಾನ್ಯರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ರಾಜ್ಯದ ಹಲವು ನಾಯಕರು ಕೇಂದ್ರ ಸರ್ಕಾರಕ್ಕೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದು, ದಶಕಗಳಿಂದ ಬಾಕಿ ಉಳಿದಿರುವ ಯೋಜನೆಗಳಿಗೆ ಈ ಬಾರಿ ನ್ಯಾಯ ಸಿಗಬೇಕೆಂಬುದು ರಾಜ್ಯದ ಜನರ ಆಶಯವಾಗಿದೆ.

ನೀರಾವರಿ ಯೋಜನೆಗಳಿಗೆ ರಾಷ್ಟ್ರೀಯ ಮಾನ್ಯತೆ ನಿರೀಕ್ಷೆ

ಕರ್ನಾಟಕದ ಪ್ರಮುಖ ನಿರೀಕ್ಷೆಗಳ ಪೈಕಿ ನೀರಾವರಿ ಯೋಜನೆಗಳು ಅಗ್ರಸ್ಥಾನದಲ್ಲಿವೆ. ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ ಹಾಗೂ ಮಹದಾಯಿ ಯೋಜನೆಗಳಿಗೆ ‘ರಾಷ್ಟ್ರೀಯ ಯೋಜನೆ’ ಸ್ಥಾನಮಾನ ನೀಡಬೇಕೆಂಬುದು ರಾಜ್ಯದ ಪ್ರಮುಖ ಬೇಡಿಕೆ. ಈ ಯೋಜನೆಗಳಿಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಲ್ಲಿ ಶೇ.90ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಇದರಿಂದ ಬರಪೀಡಿತ 23 ಜಿಲ್ಲೆಗಳ 150ಕ್ಕೂ ಹೆಚ್ಚು ತಾಲೂಕುಗಳಿಗೆ ನೀರಿನ ಭದ್ರತೆ ಒದಗುವ ಸಾಧ್ಯತೆ ಇದೆ.

ಭದ್ರಾ ಮೇಲ್ದಂಡೆ: ಘೋಷಣೆಯಾದ ಹಣ ಯಾವಾಗ?

2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವೇ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ಆ ಹಣ ಬಿಡುಗಡೆ ಆಗಿಲ್ಲ. ರಾಜ್ಯ ಸರ್ಕಾರ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಬಜೆಟ್‌ನಲ್ಲಿ ಘೋಷಿತ ಅನುದಾನ ಬಿಡುಗಡೆಗೆ ಹಸಿರು ನಿಶಾನೆ ಸಿಗಬಹುದೇ ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿದೆ.

ಇದರ ಜೊತೆಗೆ ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳಿಗೆ ಕೇಂದ್ರ ಸರ್ಕಾರ ಅಧಿಕೃತ ಅನುಮೋದನೆ ನೀಡಬೇಕಿದೆ. ಈ ಯೋಜನೆಗಳು ಜಾರಿಯಾದರೆ ಕುಡಿಯುವ ನೀರು ಮತ್ತು ಕೃಷಿ ಕ್ಷೇತ್ರಕ್ಕೆ ಮಹತ್ತರ ಲಾಭವಾಗಲಿದೆ.

ಬೆಂಗಳೂರು ಮೆಟ್ರೊ ಮತ್ತು ರೈಲ್ವೆಗೆ ಬಲ?

ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆ ನಮ್ಮ ಮೆಟ್ರೋ ಮೂರನೇ ಹಂತದ ವಿಸ್ತರಣೆಗೆ ಕೇಂದ್ರದ ಆರ್ಥಿಕ ನೆರವು ಅಗತ್ಯವಾಗಿದೆ. ಜೊತೆಗೆ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಕೂಡ ಇದೆ. ಚೆನ್ನೈ–ಬೆಂಗಳೂರು–ಮೈಸೂರು ಹೈಸ್ಪೀಡ್ ರೈಲು ಯೋಜನೆಗೆ ಈ ಬಜೆಟ್‌ನಲ್ಲಿ ಗ್ರೀನ್ ಸಿಗ್ನಲ್ ಸಿಗಲಿದೆ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿದೆ.

ರಾಜ್ಯದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಧಾರವಾಡ–ಕಿತ್ತೂರು–ಬೆಳಗಾವಿ, ಗಿಣಿಗೇರಾ–ರಾಯಚೂರು ಮಾರ್ಗಗಳು ಹಾಗೂ ಕಲಬುರಗಿ ರೈಲ್ವೆ ವಿಭಾಗದ ಕನಸು ಈಡೇರಬೇಕಿದೆ.

ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಬೇಡಿಕೆಗಳು

ಹಾಸನದಲ್ಲಿ ಐಐಟಿ ಸ್ಥಾಪನೆ, ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ, ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ ಮರುಜೀವ ಹಾಗೂ ಶಿರಾಡಿ ಸುರಂಗ ಯೋಜನೆಗೆ ವೇಗ ನೀಡಬೇಕೆಂಬುದು ರಾಜ್ಯದ ಪ್ರಮುಖ ನಿರೀಕ್ಷೆಗಳಾಗಿವೆ. ಮಂಡ್ಯದಲ್ಲಿ ಹೊಸ ಕೈಗಾರಿಕೆ ಸ್ಥಾಪನೆ ಹಾಗೂ ಮೈಸೂರು–ಕುಶಾಲನಗರ ಹೊಸ ರೈಲು ಮಾರ್ಗಕ್ಕೂ ಬಜೆಟ್‌ನಲ್ಲಿ ಸ್ಥಾನ ಸಿಗಬೇಕಿದೆ.

ಕರಾವಳಿ ಅಭಿವೃದ್ಧಿ ಮತ್ತು ಸಾಗರಮಾಲಾ ಯೋಜನೆ

360 ಕಿಲೋಮೀಟರ್ ಉದ್ದದ ಕಡಲ ತೀರ ಹೊಂದಿದ್ದರೂ ಕರ್ನಾಟಕದ ಬಂದರುಗಳು ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಕರಾವಳಿ ಹಾಗೂ ಬಂದರು ಅಭಿವೃದ್ಧಿಗೆ ಬೂಸ್ಟ್ ನೀಡಬೇಕೆಂಬುದು ರಾಜ್ಯದ ಒತ್ತಾಯವಾಗಿದೆ.

ಅತಿವೃಷ್ಟಿ, ಬರ ಮತ್ತು ಆರ್ಥಿಕ ಸವಾಲು

ನಿರಂತರ ಅತಿವೃಷ್ಟಿ, ಪ್ರವಾಹ ಹಾಗೂ ಬರದಿಂದ ರಾಜ್ಯದ ಆರ್ಥಿಕತೆ ತೀವ್ರವಾಗಿ ನಲುಗಿದೆ. ಸಾಲದ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ನಗರಾಭಿವೃದ್ಧಿಗೆ ಹೆಚ್ಚಿನ ನಿಧಿ ಹಂಚಿಕೆ ಅಗತ್ಯವಾಗಿದೆ. ಗುಜರಾತ್ ಮತ್ತು ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕಕ್ಕೂ ಬೃಹತ್ ತಾಂತ್ರಿಕ ಹಾಗೂ ಕೈಗಾರಿಕಾ ಯೋಜನೆಗಳನ್ನು ನೀಡುವ ಮೂಲಕ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕೆಂಬುದು ಉದ್ಯಮ ವಲಯದ ಬೇಡಿಕೆ.

Exit mobile version