ರಾಜ್ಯದಲ್ಲಿ ಕೊರೊನಾ ಮಹಾಮಾರಿಗೆ ಓರ್ವ ಬಲಿ: 38ಕ್ಕೇರಿದ ಸೋಂಕಿತರ ಸಂಖ್ಯೆ

Untitled design 2025 05 24t211702.023

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ತಲೆಯೆತ್ತುತ್ತಿವೆ. ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್‌ ಕೇಸ್‌ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಇದೀಗ ಕರ್ನಾಟಕದಲ್ಲೂ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ವರದಿಯಾಗಿದೆ. ರಾಜ್ಯ ಆರೋಗ್ಯ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಇಂದು ಒಬ್ಬ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಹೊಸದಾಗಿ ಐವರು ಸೋಂಕಿತರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರವು ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿದ್ದು, ಒಟ್ಟು 32 ಪ್ರಕರಣಗಳು ಇಲ್ಲಿ ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯಂತೆ, ಬೆಂಗಳೂರಿನಲ್ಲಿ 92 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ದುರಾದೃಷ್ಟವಶಾತ್‌ ಒಬ್ಬ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಹೊರಗೆ, ಮೈಸೂರಿನಲ್ಲಿ 2, ತಲಾ ಒಂದೊಂದು ಪ್ರಕರಣ ಬಳ್ಳಾರಿ, ವಿಜಯನಗರ, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವರದಿಯಾಗಿವೆ.

ರಾಜ್ಯ ಆರೋಗ್ಯ ಇಲಾಖೆಯು ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆಸ್ಪತ್ರೆಗಳಲ್ಲಿ ಐಸಿಯು ಘಟಕಗಳು ಮತ್ತು ಆಕ್ಸಿಜನ್‌ ಸೌಲಭ್ಯಗಳನ್ನು ಸಿದ್ಧಗೊಳಿಸಲಾಗಿದೆ. ಜನಸಂದಣಿಯಿರುವ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು ಈಗಲೂ ಮುಖ್ಯವಾಗಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಸಾರ್ವಜನಿಕ ಸಾರಿಗೆ, ಮಾಲ್‌ಗಳು, ಮಾರುಕಟ್ಟೆಗಳು ಮತ್ತು ಕಚೇರಿಗಳಂತಹ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ವಿಶೇಷವಾಗಿ, ರೋಗನಿರೋಧಕ ಶಕ್ತಿ ಕಡಿಮೆ ಇರುವ ವೃದ್ಧರು, ಮಕ್ಕಳು ಮತ್ತು ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಿನ ಜಾಗರೂಕತೆ ವಹಿಸಬೇಕು.

ಕೇರಳದಲ್ಲಿ ಕಂಡುಬಂದಿರುವ ಕೊರೊನಾ ಕೇಸ್‌ಗಳ ಏರಿಕೆಯು ಕರ್ನಾಟಕಕ್ಕೂ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಗಡಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಂತಹ ಪ್ರದೇಶಗಳಲ್ಲಿ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಲಸಿಕೆಯನ್ನು ಪಡೆದುಕೊಂಡಿರುವುದು ಮತ್ತು ಬೂಸ್ಟರ್‌ ಡೋಸ್‌ ತೆಗೆದುಕೊಳ್ಳುವುದು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

Exit mobile version