ರಾಜ್ಯಾದ್ಯಂತ ಚಳಿ ಆಬ್ಬರ: ಕರ್ನಾಟಕದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

Untitled design 2025 12 20T092837.443

ಬೆಂಗಳೂರು, ಡಿಸೆಂಬರ್ 20: ಕರ್ನಾಟಕ ರಾಜ್ಯದೆಲ್ಲೆಡೆ ಚಳಿಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ತರ ಒಳನಾಡು ಭಾಗಗಳಲ್ಲಿ ಶೀತದಲೆಯ ಪ್ರಭಾವ ಹೆಚ್ಚಾಗಿರುವುದರಿಂದ ಜನಜೀವನ ಸಾಕಷ್ಟು ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯು ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಇನ್ನೂ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಈ ಚಳಿಯಿಂದ ಮಕ್ಕಳು, ವೃದ್ಧರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚು ಎಚ್ಚರ ವಹಿಸಬೇಕು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಆರೆಂಜ್ ಅಲರ್ಟ್ ಘೋಷಿಸಲಾದ ಜಿಲ್ಲೆಗಳು ಬೀದರ್, ಕಲಬುರಗಿ (ಗುಲ್ಬರ್ಗಾ), ರಾಯಚೂರು, ವಿಜಯಪುರ (ಬಿಜಾಪುರ) ಮತ್ತು ಯಾದಗಿರಿ. ಈ ಭಾಗಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಬಹಳ ಕಡಿಮೆಯಾಗಿದ್ದು, ರಾತ್ರಿ ಮತ್ತು ಬೆಳಗ್ಗೆ ತೀವ್ರ ಚಳಿ ಇರಲಿದೆ. ಕಳೆದ ಕೆಲವು ದಿನಗಳಲ್ಲಿ ಬೀದರ್ ಮತ್ತು ವಿಜಯಪುರದಲ್ಲಿ ಕನಿಷ್ಠ ತಾಪಮಾನ 7-8 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿದಿದೆ ಎಂದು ವರದಿಯಾಗಿದೆ.

ಯೆಲ್ಲೋ ಅಲರ್ಟ್ ನೀಡಲಾದ ಜಿಲ್ಲೆಗಳು ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ. ಈ ಜಿಲ್ಲೆಗಳಲ್ಲಿಯೂ ಚಳಿಯ ಪ್ರಮಾಣ ಹೆಚ್ಚಿದ್ದು, ಜನರು ಮುಂಜಾನೆ ಮತ್ತು ಸಂಜೆ ಹೊರಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಉತ್ತರ ಭಾರತದಿಂದ ಬೀಸುತ್ತಿರುವ ಒಣ ಮತ್ತು ಶೀತ ಗಾಳಿಯೇ ಈ ಚಳಿಗೆ ಮುಖ್ಯ ಕಾರಣ.

ರಾಜ್ಯದ ಹಲವು ಭಾಗಗಳಲ್ಲಿ ಒಣ ಹವೆಯ ವಾತಾವರಣ ಮುಂದುವರಿದಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆಯೇ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿಯೂ ಇದೇ ಸ್ಥಿತಿ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿಯೂ ಒಣ ಹವೆಯೇ ಇರಲಿದೆ.

ರಾಜಧಾನಿ ಬೆಂಗಳೂರಿನಲ್ಲಿಯೂ ಚಳಿಯ ಪ್ರಭಾವ ಮುಂದುವರಿದಿದೆ. ಮೋಡ ಕವಿದ ವಾತಾವರಣದೊಂದಿಗೆ ಮೈಕೊರೆಯುವ ಚಳಿ ಜನರನ್ನು ಕಾಡುತ್ತಿದೆ. ಇಂದು ಬೆಂಗಳೂರಿನ ಕನಿಷ್ಠ ತಾಪಮಾನ ಸುಮಾರು 14-15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 26-27 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಬೆಳಗ್ಗೆ ದಟ್ಟವಾದ ಮಂಜು ಮತ್ತು ತಂಪಾದ ಗಾಳಿ ಬೀಸುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಲಾಯಿಸುವಂತೆ ಸಲಹೆ ನೀಡಲಾಗಿದೆ.

ವೈದ್ಯಕೀಯ ತಜ್ಞರು ಮತ್ತು ಹವಾಮಾನ ಇಲಾಖೆಯು ಸಾರ್ವಜನಿಕರಿಗೆ ಕೆಲವು ಮುಖ್ಯ ಸಲಹೆಗಳನ್ನು ನೀಡಿದ್ದಾರೆ. ಬೆಚ್ಚನೆಯ ಉಡುಪುಗಳಾದ ಸ್ವೆಟರ್, ಜಾಕೆಟ್, ಶಾಲು ಮತ್ತು ಕೈಗವಸುಗಳನ್ನು ಧರಿಸಿ. ಮುಂಜಾನೆ ಮತ್ತು ಸಂಜೆ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಸಮತೋಲನ ಆಹಾರ ಸೇವಿಸಿ, ಬಿಸಿ ಪಾನೀಯಗಳು ಮತ್ತು ಸೂಪ್‌ಗಳನ್ನು ಹೆಚ್ಚು ಸೇವಿಸಿ. ಮಕ್ಕಳು ಮತ್ತು ವೃದ್ಧರನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳಿ. ಶೀತಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Exit mobile version