ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಜಮೀರ್, ರುದ್ರಪ್ಪ ಲಮಾಣಿ, ಸಂತೋಷ್ ಲಾಡ್ ಪ್ರಮಾಣವಚನ ಸ್ವೀಕಾರ

Untitled design 2026 08 03T184603.989

ಬೆಂಗಳೂರು (ಆ.3): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಸಚಿವ ಸಂಪುಟ ವಿಸ್ತರಣೆಯ ಬಗ್ಗೆಯೇ ಭಾರೀ ಚರ್ಚೆಗಳು ನಡೆಯುತ್ತಿದ್ದವು. ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದ ಶಾಸಕರು ಈ ಬಾರಿ ಪಟ್ಟಿ ಗಿಟ್ಟಿಸಿಕೊಳ್ಳಲು ಬಹಳ ಕಸರತ್ತು ಮಾಡಿದ್ದರು. ಇದೀಗ ಕೊನೆಗೂ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಲೋಕಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಹಂತದಲ್ಲಿ ನಿರಾಸೆ ಅನುಭವಿಸಿದ್ದ ಜಮೀರ್ ಅಹ್ಮದ್ ಖಾನ್ ಅವರು ಕೊನೆಗೂ ಸಚಿವ ಸ್ಥಾನ ಗಿಟ್ಟಿಸಿಕೊಂಡು, ಆಂಗ್ಲಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.

ಬಿ.ಝಡ್. ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ): ಆಂಗ್ಲಭಾಷೆಯಲ್ಲಿ ಶಪಥ

ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್‌ನ ಪ್ರಭಾವಿ ಅಲ್ಪಸಂಖ್ಯಾತ ನಾಯಕರು. ಹಿಂದಿನ ಸರ್ಕಾರದಲ್ಲಿ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, ವಿಜಯನಗರ-ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದಾರೆ. ಉದ್ಯಮ ಮತ್ತು ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಹಿನ್ನೆಲೆ ಹೊಂದಿರುವ ಅವರು, ಸಂಪುಟದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರು ಅಲ್ಲಾ ಹಾಗೂ ತಾಯಿಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. 

ಟಿ. ರಘುಮೂರ್ತಿ (ಚಳ್ಳಕೆರೆ – ಎಸ್ಟಿ ಮೀಸಲು)

ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ರಘುಮೂರ್ತಿ ಅವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಬಂದವರು. 2013, 2018 ಮತ್ತು 2023ರ ಚುನಾವಣೆಯಲ್ಲಿ ಸತತವಾಗಿ ಗೆದ್ದು ‘ಹ್ಯಾಟ್ರಿಕ್’ ಸಾಧಿಸಿರುವ ಇವರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ರಿಜ್ವಾನ್ ಅರ್ಷದ್ (ಶಿವಾಜಿನಗರ)

1995-96ರಲ್ಲಿ ಎನ್ಎಸ್ಯುಐ (NSUI) ವಿದ್ಯಾರ್ಥಿ ಸಂಘಟನೆಯ ಮೂಲಕ ರಾಜಕೀಯ ಆರಂಭಿಸಿದ ರಿಜ್ವಾನ್ ಅರ್ಷದ್ ಅವರು ಬಿಕಾಂ ಪದವೀಧರರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿದ್ದ ಇವರು, 2019ರ ಶಿವಾಜಿನಗರ ಉಪಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದರು. ಬೆಂಗಳೂರಿನ ಯುವ ನಾಯಕತ್ವದ ಸಂಕೇತವಾಗಿ ಇವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ರುದ್ರಪ್ಪ ಲಮಾಣಿ (ಹಾವೇರಿ – ಎಸ್ಸಿ ಮೀಸಲು)

ಬಿ.ಎ., ಎಲ್ಎಲ್ಬಿ ಪದವಿ ಪಡೆದಿರುವ ರುದ್ರಪ್ಪ ಲಮಾಣಿ ಅವರು ನಿಷ್ಠಾವಂತ ಕಾಂಗ್ರೆಸ್ ನಾಯಕರಾಗಿದ್ದು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಂಜಾರ ಸಮುದಾಯದ ಪ್ರಮುಖ ನಾಯಕರಾದ ಇವರು ಹಿಂದೆ ಜವಳಿ ಮತ್ತು ಮುಜರಾಯಿ ಇಲಾಖೆಯ ಸಚಿವರಾಗಿದ್ದರು. ಪ್ರಸ್ತುತ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇಂದು ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಂತೋಷ್ ಲಾಡ್ (ಕಲಘಟಗಿ)

ವಾಣಿಜ್ಯ ಪದವೀಧರರಾದ ಸಂತೋಷ್ ಲಾಡ್ ಅವರು 4 ಬಾರಿ ಶಾಸಕರಾಗಿ ಮತ್ತು 2 ಬಾರಿ ಸಚಿವರಾಗಿ ರಾಜಕೀಯ ಅನುಭವ ಹೊಂದಿದ್ದಾರೆ. 2003ರಲ್ಲಿ ಜೆಡಿಎಸ್ ಪಕ್ಷದಿಂದ ಸಂಡೂರು ಕ್ಷೇತ್ರದ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಇವರು, 2007ರಲ್ಲಿ ಕಾಂಗ್ರೆಸ್ ಸೇರಿದರು. ಸದ್ಯ ಕಾರ್ಮಿಕ ಸಚಿವರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಕೆ.ಎಂ. ಶಿವಲಿಂಗೇಗೌಡ (ಅರಸೀಕೆರೆ)

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವಲಿಂಗೇಗೌಡ ಅವರು ಬಿ.ಎ. ಪದವೀಧರರು. ಆರಂಭದಲ್ಲಿ ಜೆಡಿಎಸ್‌ನ ವಾಕ್ಚತುರ ನಾಯಕರಾಗಿದ್ದ ಇವರು, 2023ರ ಚುನಾವಣೆಗಿಂತ ಮುಂಚಿತವಾಗಿ ಕಾಂಗ್ರೆಸ್ ಸೇರಿ ಗೆಲುವು ಸಾಧಿಸಿದ್ದರು. ಸದ್ಯ ಕರ್ನಾಟಕ ಗೃಹ ಮಂಡಳಿ (KHB) ಅಧ್ಯಕ್ಷರಾಗಿದ್ದ ಇವರಿಗೆ ಸಂಪುಟ ಸೇರಲು ಹಸಿರು ನಿಶಾನೆ ಸಿಕ್ಕಿದ್ದು, ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಶಿವರಾಜ ಸಂಗಪ್ಪ ತಂಗಡಗಿ (ಕನಕಗಿರಿ)

ವಿಜ್ಞಾನ ಪದವೀಧರರಾದ (B.Sc) ತಂಗಡಗಿ ಅವರು ಒಟ್ಟು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಇವರು, ಅಂದಿನ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. 2013ರ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ ಇವರು, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಮತ್ತೆ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವ ಮೂಲಕ ಸಚಿವರಾಗಿದ್ದಾರೆ.

ವಿಜಯಾನಂದ ಕಾಶಪ್ಪನವರ್ (ಹುನಗುಂದ)

ಕಾಂಗ್ರೆಸ್ ಪಕ್ಷದ ಸಕ್ರಿಯ ಮತ್ತು ಯುವ ನಾಯಕರಾಗಿರುವ ಕಾಶಪ್ಪನವರ್ ಅವರು ಸಾಮಾಜಿಕ ಹಾಗೂ ಪರಿಸರ ಕಾಳಜಿಯ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ ಸಮಾಜಮುಖಿ ಸೇವೆಗಾಗಿ ಇಂದಿರಾ ಗಾಂಧಿ ರಾಷ್ಟ್ರೀಯ ಸೇವಾ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಈ ಬಾರಿ ಡಿಕೆಶಿ ಸಂಪುಟದ ಸಚಿವರಾಗುತ್ತಿದ್ದು, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

Exit mobile version