ಸಚಿವ ಸಂಪುಟ ವಿಸ್ತರಣೆಗೆ ತೀವ್ರ ಕಸರತ್ತು: ದೆಹಲಿಯಲ್ಲಿ ಇಂದು ಹೈಕಮಾಂಡ್‌ ಜೊತೆ ಡಿಕೆ, ಸಿದ್ದು ಮೀಟಿಂಗ್‌

ಬಾಗಲಕೋಟೆಯಲ್ಲಿ ಬೆಚ್ಚಿಬೀಳಿಸಿದ ಕೃತ್ಯ ಪತ್ನಿಯನ್ನು ನೇಣುಹಾಕಿ ವಿಡಿಯೋ ಮಾಡಿದ ಪಾಪಿ ಪತಿ (1)

ಬೆಂಗಳೂರು (ಜು.28): ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಕುರಿತು ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಚರ್ಚೆಗೆ ಇಂದು ಮಹತ್ವದ ತಿರುವು ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಇಂದು ರಾತ್ರಿ 8 ಗಂಟೆಗೆ ದೆಹಲಿಯಲ್ಲಿ ನಿರ್ಣಾಯಕ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಹೊಸ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಮೂಲಗಳ ಪ್ರಕಾರ, ಸಭೆಯಲ್ಲಿ ಒಪ್ಪಿಗೆ ದೊರೆತರೆ ಗುರುವಾರ ಸಂಜೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ. ಪ್ರಸ್ತುತ ಖಾಲಿ ಇರುವ 20 ಸಚಿವ ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿ, ಉಳಿದ ಎರಡು ಸ್ಥಾನಗಳನ್ನು ರಾಜಕೀಯ ಹಾಗೂ ಪ್ರಾದೇಶಿಕ ಸಮತೋಲನಕ್ಕಾಗಿ ಖಾಲಿ ಉಳಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆಯ ಹಿನ್ನೆಲೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಸುಮಾರು 30 ಶಾಸಕರ ಹೆಸರಿನ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಈ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಶಾಸಕರ ಹೆಸರಿನೊಂದಿಗೆ ಅವರು ಸಚಿವರಾಗಲು ಯಾಕೆ ಅರ್ಹರು ಎಂಬುದರ ಕುರಿತು ವಿವರವಾದ ಲಿಖಿತ ವರದಿಯನ್ನೂ ಸಲ್ಲಿಸಲಾಗಿದೆ ಎನ್ನಲಾಗಿದೆ. ಅಂತಿಮವಾಗಿ ಈ ಪಟ್ಟಿಯಿಂದ 18 ಮಂದಿಯನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಹೈಕಮಾಂಡ್ ಮೇಲಿದೆ.

ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರಲ್ಲಿ 7 ರಿಂದ 8 ಮಂದಿಗೆ ಸಚಿವ ಸ್ಥಾನ ನೀಡಬೇಕು ಎಂಬ ನಿಲುವು ಹೊಂದಿದ್ದು, ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ನೇರವಾಗಿ ರಾಹುಲ್ ಗಾಂಧಿ ಮುಂದೆ ಮಂಡಿಸುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೂ ಕೆಲವು ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ.

ಈ ನಡುವೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸೋಮವಾರವೇ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ, ಹೈಕಮಾಂಡ್ ತನ್ನದೇ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಅರ್ಹರಾಗಬಹುದಾದ ಶಾಸಕರ ಪ್ರತ್ಯೇಕ ಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದೆ. ರಾಜ್ಯ ನಾಯಕರ ಶಿಫಾರಸು ಹಾಗೂ ಹೈಕಮಾಂಡ್ ಪಟ್ಟಿಯನ್ನು ಹೋಲಿಕೆ ಮಾಡಿ ಅಂತಿಮ ಪಟ್ಟಿಯನ್ನು ರೂಪಿಸುವ ಕಾರ್ಯ ಇಂದು ನಡೆಯುವ ಸಾಧ್ಯತೆ ಇದೆ.

ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣ ಸೋಮವಾರ ರಾಹುಲ್ ಗಾಂಧಿ ರಾಜ್ಯ ನಾಯಕರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ನೀಟ್ ಪರೀಕ್ಷೆ ಕುರಿತ ಚರ್ಚೆಯ ಸಿದ್ಧತೆಯಲ್ಲಿ ನಿರತರಾಗಿದ್ದ ಹಿನ್ನೆಲೆ ಸಭೆಯನ್ನು ಇಂದು ರಾತ್ರಿ 8 ಗಂಟೆಗೆ ಮರುನಿಗದಿ ಮಾಡಲಾಗಿದೆ. ಹೀಗಾಗಿ ಇಂದಿನ ಸಭೆಯು ಕರ್ನಾಟಕ ರಾಜಕೀಯದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

Exit mobile version