ಬೆಂಗಳೂರು (ಆ.3): ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಅಂತಿಮವಾಗಿ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು (ಸೋಮವಾರ) ಸಂಜೆ 05 ಗಂಟೆಗೆ ನಡೆಯಲಿದೆ ಎಂದು ಲೋಕಭವನ ಮೂಲಗಳು ತಿಳಿಸಿವೆ. ಈ ಮೂಲಕ ಸುದೀರ್ಘ ಕಾಲದಿಂದ ನಡೆಯುತ್ತಿದ್ದ ಚರ್ಚೆ, ಜಾತಿ ಸಮತೋಲನ, ಜಿಲ್ಲಾವಾರು ಪ್ರಾತಿನಿಧ್ಯದ ಎಲ್ಲ ಲೆಕ್ಕಾಚಾರಗಳಿಗೆ ತೆರೆ ಬಿದ್ದಿದೆ.
ಡೆಲ್ಲಿ ಸಭೆಯಲ್ಲಿ ಅಂತಿಮ ಮುದ್ರೆ
ಇದಕ್ಕೂ ಮುನ್ನ ನವದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು. ಸುಮಾರು 45 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಒತ್ತಿದ್ದಾರೆ.
ಈ ಸಭೆಯಲ್ಲಿ ಸಚಿವರ ಆಯ್ಕೆ, ಖಾತೆ ಹಂಚಿಕೆಯ ಮಾದರಿ ಮತ್ತು ಇತರೆ ರಾಜಕೀಯ ಸಮೀಕರಣಗಳ ಕುರಿತು ವಿವರವಾದ ಚರ್ಚೆ ನಡೆದಿದೆ. ಪಕ್ಷದ ಹೈಕಮಾಂಡ್ ಈ ಪಟ್ಟಿಗೆ ಪೂರ್ಣ ಅನುಮೋದನೆ ನೀಡಿದ್ದು, ಯಾವುದೇ ಮರುಪರಿಶೀಲನೆಗೆ ಅವಕಾಶವಿಲ್ಲ ಎಂದು ತಿಳಿದುಬಂದಿದೆ.
ಸಂಪುಟ ಸೇರಲಿರುವ 19 ನೂತನ ಸಚಿವರ ಪಟ್ಟಿ
ಸಂಪುಟ ವಿಸ್ತರಣೆಯಲ್ಲಿ ಒಟ್ಟು 19 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೂತನ ಸಚಿವರ ಪಟ್ಟಿ ಹೀಗಿದೆ:
-
ಪಿ.ಎಂ. ನರೇಂದ್ರಸ್ವಾಮಿ
-
ಶಿವರಾಜ್ ತಂಗಡಗಿ
-
ರುದ್ರಪ್ಪ ಲಮಾಣಿ
-
ಕೆ.ಎಸ್. ಬಸವಂತಪ್ಪ
-
ಬಿ. ನಾಗೇಂದ್ರ
-
ಟಿ. ರಘುಮೂರ್ತಿ
-
ಬಿ.ಝಡ್. ಜಮೀರ್ ಅಹಮದ್ ಖಾನ್
-
ರಿಜ್ವಾನ್ ಅರ್ಷದ್
-
ಸಂತೋಷ್ ಲಾಡ್
-
ಮಧು ಬಂಗಾರಪ್ಪ
-
ಪುಟ್ಟರಂಗಶೆಟ್ಟಿ
-
ಮಂಕಾಳ ವೈದ್ಯ
-
ಅಜಯ್ ಸಿಂಗ್
-
ಎನ್. ಚಲುವರಾಯ ಸ್ವಾಮಿ
-
ಕೆ.ಎಂ. ಶಿವಲಿಂಗೇಗೌಡ
-
ಎಚ್.ಸಿ. ಬಾಲಕೃಷ್ಣ
-
ಗಾಯತ್ರಿ ಶಾಂತೇಗೌಡ
-
ಬಸವರಾಜ ರಾಯರೆಡ್ಡಿ
-
ವಿಜಯಾನಂದ ಕಾಶಪ್ಪನವರ್
-
ಲಕ್ಷ್ಮಣ ಸವದಿ
ಒಟ್ಟಾರೆ 20 ಹೆಸರುಗಳನ್ನು ಪ್ರಕಟಿಸಲಾಗಿದ್ದು, ಕೊನೆಯ ಕ್ಷಣದ ಲೆಕ್ಕಾಚಾರದಲ್ಲಿ ಎಲ್ಲರೂ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಆದಾಗ್ಯೂ, ಸಚಿವರ ಸಂಖ್ಯೆಯಲ್ಲಿ ಏರಿಳಿತವಾಗಬಹುದು ಎಂದು ಹೇಳಲಾಗಿದೆ.
ಶಾಸಕರ ನಡುವೆ ಭಾರೀ ಪೈಪೋಟಿ
ಸಂಪುಟ ವಿಸ್ತರಣೆಗೂ ಮುನ್ನ ಶಾಸಕರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾಗುತ್ತಿರುವ ಸಂಭಾವ್ಯ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖ ನಾಯಕರ ಹೆಸರುಗಳು ತೀವ್ರ ಚರ್ಚೆಯಲ್ಲಿತ್ತು. ಇವರಲ್ಲಿ ಕೆಲವರು ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಮತ್ತೆ ಸಂಪುಟ ಸೇರುವ ಸಾಧ್ಯತೆಯಿತ್ತು.
ಜಿಲ್ಲಾವಾರು ಪ್ರಾತಿನಿಧ್ಯ, ಜಾತಿ ಸಮತೋಲನ ಹಾಗೂ ಭಿನ್ನಮತ ಶಮನಗೊಳಿಸುವ ವಿಚಾರದಲ್ಲಿ ಶಾಸಕರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ವಿಶೇಷವಾಗಿ ವೀರಶೈವ-ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ-ಪಂಗಡ ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಬಗ್ಗೆ ಹೆಚ್ಚಿನ ಚರ್ಚೆ ನಡೆದಿದೆ.
ಲೋಕಭವನದಲ್ಲಿ ಭಾರೀ ಸಿದ್ಧತೆ
ಲೋಕಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಅತಿಥಿಗಳಿಗಾಗಿ ಹೊರಭಾಗದಲ್ಲಿ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯು ಮೂರು ದಿನಗಳ ಹಿಂದೆಯೇ ಸಿದ್ಧತಾ ಕಾರ್ಯಗಳನ್ನು ಆರಂಭಿಸಿದೆ. ಭದ್ರತಾ ದೃಷ್ಟಿಯಿಂದ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಲೋಕಭವನ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಅತಿಥಿಗಳ ಆಗಮನ, ವಾಹನ ಸಂಚಾರ ವ್ಯವಸ್ಥೆ ಕುರಿತು ಪೊಲೀಸ್ ಇಲಾಖೆ ವಿಶೇಷ ಯೋಜನೆ ರೂಪಿಸಿದೆ.
