ಬೆಂಗಳೂರು: ರಾಜ್ಯದ ಮಹಿಳೆಯರು ಮತ್ತು ಬಡವರಿಗೆ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ 2026-27ನೇ ಸಾಲಿನ ಬಜೆಟ್‌ನಲ್ಲಿ ಭರ್ಜರಿ ಗುಡ್ ನ್ಯೂಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳಿಗೆ ಇನ್ನಷ್ಟು ಮೆರಗು ನೀಡುವ ನಿಟ್ಟಿನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗುವುದು ಎಂದು ತಿಳಿದುಬಂದಿದೆ.
ಗೃಹಲಕ್ಷ್ಮೀ ಫಲಾನುಭವಿಗಳಿಗೆ ವಾರ್ಷಿಕ ತಲಾ 2 ಸೀರೆ ವಿತರಿಸುವ ಯೋಜನೆ ಘೋಷಣೆಯಾಗುವ ಸಾಧ್ಯತೆಯಿದೆ. 1.24 ಕೋಟಿ ಮಹಿಳೆಯರಿಗೆ ಮಾಸಿಕ 2,000 ರೂ. ನೆರವು ನೀಡಲಾಗುತ್ತಿದ್ದು, ಈಗ ಹೆಚ್ಚುವರಿಯಾಗಿ ಸೀರೆ ವಿತರಣೆಯಿಂದ ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ನೆರವಾಗಲಿದೆ. ಈ ಸೀರೆಗಳನ್ನು ಲಕ್ಷ್ಮೀ ಸ್ವ-ಸಹಾಯ ಸಂಘಗಳ ಮೂಲಕ ವಿತರಿಸುವ ಸಾಧ್ಯತೆ ಇದೆ.
ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಸದ್ಯ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಈಗ ಅದನ್ನು 5 ಕೆಜಿ ಅಕ್ಕಿ ಮತ್ತು 5 ಕೆಜಿ ಅಕ್ಕಿ ಬೆಲೆಗೆ ಸಮಾನವಾದ ‘ಇಂದಿರಾ ಆಹಾರ ಕಿಟ್’ ವಿತರಿಸಲು ಯೋಜನೆ ರೂಪಿಸಲಾಗಿದೆ. ಈ ಕಿಟ್‌ನಲ್ಲಿ ತಲಾ 1 ಕೆಜಿ ತೊಗರಿ ಬೇಳೆ, ಹೆಸರುಕಾಳು, ಸಕ್ಕರೆ, ಉಪ್ಪು ಮತ್ತು 1 ಲೀಟರ್ ಅಡುಗೆ ಎಣ್ಣೆ ಇರಲಿದೆ. ಇದರಿಂದ ಬಡವರ ಪೌಷ್ಟಿಕಾಂಶದ ಕೊರತೆ ನೀಗಲಿದೆ.
ಇದರ ಜೊತೆಗೆ ಸರ್ಕಾರದ ಏಳನೇ ಗ್ಯಾರಂಟಿಯಾಗಿ ‘ಆಶ್ರಯ’ ವಸತಿ ಯೋಜನೆ ಅಡಿ ಮನೆ ಹಂಚಿಕೆ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವ ನೂತನ ಯೋಜನೆಯನ್ನು ಘೋಷಿಸಲಾಗುತ್ತಿದೆ. ವಸತಿ ಹಂಚಿಕೆಯಲ್ಲಿ ಆಗುತ್ತಿರುವ ಗೊಂದಲ ನಿವಾರಿಸಿ, ಅರ್ಹ ಫಲಾನುಭವಿಗಳಿಗೆ ಮನೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಪ್ರಮುಖ ಯೋಜನೆಗಳಿಗೆ ಭರ್ಜರಿ ಅನುದಾನ
ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) 3ನೇ ಹಂತದ ಅನುಷ್ಠಾನಕ್ಕಾಗಿ 1.33 ಲಕ್ಷ ಎಕರೆ ಭೂಸ್ವಾಧೀನಕ್ಕೆ ಚಾಲನೆ ನೀಡಲಾಗುತ್ತಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಸುಮಾರು 8,000 ರಿಂದ 15,000 ಕೋಟಿ ರೂ.ಗಳನ್ನು ಮೀಸಲಿಡುವ ನಿರೀಕ್ಷೆಯಿದೆ. ಅಲ್ಲದೆ, ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ಶಿಫಾರಸ್ಸಿನಂತೆ ಹಿಂದುಳಿದ 172 ತಾಲೂಕುಗಳ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 43,914 ಕೋಟಿ ರೂ. ನೀಡಲಾಗುವುದು. ಪ್ರಸಕ್ತ ವರ್ಷಕ್ಕೆ ಸುಮಾರು 8,500 ರಿಂದ 9,000 ಕೋಟಿ ರೂ. ಬಿಡುಗಡೆ ಮಾಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ.
ಬಜೆಟ್ ಗಾತ್ರ 4.50 ಲಕ್ಷ ಕೋಟಿ ರೂ.
ಕಳೆದ ಬಾರಿ 4.09 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಈ ಬಾರಿ ವೇತನ ಪರಿಷ್ಕರಣೆ, ಹಣದುಬ್ಬರ ಮತ್ತು ಹೊಸ ಯೋಜನೆಗಳಿಂದಾಗಿ ಬಜೆಟ್ ಗಾತ್ರ 4.50 ಲಕ್ಷ ಕೋಟಿ ರೂ. ತಲುಪುವ ಸಾಧ್ಯತೆಯಿದೆ. ಈ ಬಾರಿಯೂ ಸುಮಾರು 1.14 ಲಕ್ಷ ಕೋಟಿ ರೂ. ಸಾಲ ಪಡೆಯಲು ಸರ್ಕಾರ ಮುಂದಾಗಿದೆ.
ಜನಸಾಮಾನ್ಯರಿಗೆ ಹೊರೆ ಹೆಚ್ಚಳ?
ಹೊಸ ಯೋಜನೆಗಳಿಗೆ ಹಣಕಾಸು ಒದಗಿಸಲು ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್, ಅಬಕಾರಿ ಸುಂಕ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ ಹೆಚ್ಚಳದ ಸಾಧ್ಯತೆಗಳಿವೆ. ಇದರಿಂದ ಜನಸಾಮಾನ್ಯರ ಮೇಲೆ ಹೆಚ್ಚುವರಿ ತೆರಿಗೆ ಹೊರೆ ಬೀಳುವ ಸಾಧ್ಯತೆ ಇದೆ.
