ಪ್ರೀತಿಸಿದವಳಿಗೆ ಕೈ ಕೊಟ್ಟು ಬೇರೆ ಹುಡುಗಿ ಜೊತೆ ಮದ್ವೆ: ಕಲ್ಯಾಣ ಮಂಟಪಕ್ಕೆ ನುಗ್ಗಿ ಯುವತಿ ರಂಪಾಟ

Untitled design 2025 12 14T121057.104

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರೇಮ ಮೋಸದ ಆಘಾತಕಾರಿ ಘಟನೆ ನಡೆದಿದೆ. ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಕೈಕೊಟ್ಟು ಬೇರೊಬ್ಬಳ ಜೊತೆ ಮದುವೆಯಾಗುತ್ತಿದ್ದ ಯುವಕನ ಮದುವೆ ಮಂಟಪಕ್ಕೆ ಪ್ರೇಯಸಿ ನುಗ್ಗಿ ಪ್ರತಿಭಟನೆ ನಡೆಸಿದ್ದಾಳೆ. ಆದರೆ ಮದುವೆ ನಡೆದು ಮುಗಿದ ಬಳಿಕ ಯುವಕನ ಕುಟುಂಬಸ್ಥರು ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಡಿಸೆಂಬರ್ 13ರಂದು ಚಿಕ್ಕಮಗಳೂರು ನಗರದ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಚಿಕ್ಕಮಗಳೂರು ಮೂಲದ ಶರತ್ ಎಂಬ ಯುವಕ ಹಾಸನ ಜಿಲ್ಲೆಯ ಬೇಲೂರು ತಾಲೂಕದ ಯುವತಿಯನ್ನು ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದನು. ಇಬ್ಬರ ನಡುವೆ ಪ್ರೀತಿ ಬೆಳೆದಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿ ಯುವತಿಯನ್ನು ನಂಬಿಸಿದ್ದನು. ಯುವತಿಯ ಕುಟುಂಬಕ್ಕೂ ಶರತ್ ಪರಿಚಯವಿದ್ದು, ಮದುವೆಗೆ ಒಪ್ಪಿಗೆ ಸಿಕ್ಕಿತ್ತು. ಕಳೆದ ನವರಾತ್ರಿ ಸಮಯದಲ್ಲಿ ಎರಡೂ ಕುಟುಂಬಗಳ ನಡುವೆ ಮದುವೆ ಮಾತುಕತೆ ನಡೆದಿತ್ತು ಎನ್ನಲಾಗಿದೆ.

ಆದರೆ ಶರತ್ ತನ್ನ ಮೊದಲ ಮದುವೆಯನ್ನು ಮುಚ್ಚಿಟ್ಟಿದ್ದನು. ಮೂರು ವರ್ಷಗಳ ಹಿಂದೆ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಆತ, ಈ ವಿಷಯವನ್ನು ಹಳೇ ಪ್ರೇಯಸಿಗೆ ಹೇಳದೇ ಮತ್ತೆ ಪ್ರೀತಿ ನಾಟಕ ಆಡಿದ್ದನು. ದುಬೈಗೆ ಹೋಗುವುದಾಗಿ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದ ಶರತ್, ಬಳಿಕ ಮತ್ತೊಬ್ಬ ಯುವತಿಯೊಂದಿಗೆ ಮದುವೆ ಫಿಕ್ಸ್ ಮಾಡಿಕೊಂಡಿದ್ದನು.

ಹಾಸನದಿಂದ ಚಿಕ್ಕಮಗಳೂರಿಗೆ ಧಾವಿಸಿ ಬಂದ ಸಂತ್ರಸ್ತೆ, ಶರತ್ ಮನೆಗೆ ಹೋಗಿ ಮೋಸದ ಬಗ್ಗೆ ಪ್ರಶ್ನಿಸಿದಳು. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಪೊಲೀಸರು ಶರತ್‌‌ನನ್ನು ಕರೆಸಿ ಬುದ್ಧಿ ಹೇಳಿದರು. ಮದುವೆ ನಿಲ್ಲಿಸುವಂತೆಯೂ, ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ ಯುವತಿಯನ್ನೇ ಮದುವೆಯಾಗುವಂತೆ ಸಲಹೆ ನೀಡಿದರು. ಠಾಣೆಯಲ್ಲಿ ಪೊಲೀಸರ ಮುಂದೆ ಒಪ್ಪಿಕೊಂಡ ಶರತ್, ಮರುದಿನವೇ ಬೇರೊಬ್ಬ ಯುವತಿಯೊಂದಿಗೆ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಿದ್ಧನಾಗಿದ್ದ

ವಿಷಯ ತಿಳಿದ ಯುವತಿ ಮದುವೆ ಮಂಟಪಕ್ಕೆ ಧಾವಿಸಿ ಬಂದು ಪ್ರತಿಭಟನೆ ನಡೆಸಿದಳು. “ನನ್ನನ್ನು ಮದುವೆಯಾಗು” ಎಂದು ಪಟ್ಟು ಹಿಡಿದು ಮದುವೆ ನಿಲ್ಲಿಸಲು ಯತ್ನಿಸಿದಳು. ಆದರೆ ಪೊಲೀಸರು ಬರುವಷ್ಟರಲ್ಲಿ ಶರತ್ ತಾಳಿ ಕಟ್ಟಿ ಮದುವೆ ಮುಗಿಸಿದ್ದನು. ಮದುವೆ ಮುಗಿದ ಬಳಿಕ ಮಂಟಪದ ಬಳಿ ಧರಣಿ ಕುಳಿತು ಪ್ರತಿಭಟಿಸುತ್ತಿದ್ದ ಯುವತಿ ಮೇಲೆ ಯುವಕನ ತಾಯಿ ಮತ್ತು ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. “ಹಣ ಕೊಡ್ತೀವಿ, ಸ್ಥಳ ಬಿಟ್ಟು ಹೋಗು” ಎಂದು ಪೊಲೀಸರ ಮುಂದೆಯೇ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Exit mobile version