ಬೀದರ್: ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಅತ್ಯಾಚಾರ, ಮೋಸ ಮತ್ತು ಜೀವಬೆದರಿಕೆಯ ಗಂಭೀರ ಆರೋಪಗಳು ಕೇಳಿ ಬಂದಿವೆ. ಸಂತ್ರಸ್ತೆ ಒಬ್ಬಳು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತನ್ನ ಮೇಲೆ ನಡೆದ ಅನ್ಯಾಯದ ಬಗ್ಗೆ ವಿವರಿಸಿದ್ದಾರೆ.
ಸಂತ್ರಸ್ತೆ ಹೇಳಿರುವ ಪ್ರಕಾರ, ಪ್ರತೀಕ್ ಚೌಹಾಣ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮೊಂದಿಗೆ ಪರಿಚಯವಾಯಿತು. ನಂತರ ಈ ಪರಿಚಯವು ಪ್ರೀತಿಯ ಸಂಬಂಧಕ್ಕೆ ತಿರುಗಿತ್ತು. ಪ್ರತೀಕ್ ಮದುವೆಯ ಭರವಸೆ ನೀಡಿದ್ದು, ಈ ಭರವಸೆಯ ಮೇಲೆ ಇಬ್ಬರೂ ಸಾಕಷ್ಟು ಬಾರಿ ಒಟ್ಟಿಗೆ ಕಾಲ ಕಳೆದಿದ್ದಾರೆ. ಆದರೆ, ಬೆಂಗಳೂರಿನ ಒಂದು ಲಾಡ್ಜ್‌ನಲ್ಲಿ ಪ್ರತೀಕ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸಂತ್ರಸ್ತೆಯ ಪ್ರಕಾರ, ಅತ್ಯಾಚಾರದ ನಂತರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ, ಪ್ರತೀಕ್ ಮದುವೆಯನ್ನು ತಡವಾಗಿಸುತ್ತಲೇ ಬಂದಿದ್ದಾರೆ. “ದೊಡ್ಡ-ದೊಡ್ಡವರನ್ನು ಕರೆಯಿಸಿ ಅದ್ಧೂರಿ ಮದುವೆ ಮಾಡೋಣ,” ಎಂದು ಭರವಸೆ ನೀಡಿದ್ದರೂ, ನಂತರ ಒಂದಲ್ಲ ಒಂದು ನೆಪವೊಡ್ಡಿ ಮದುವೆಯನ್ನು ಮುಂದೂಡಿದ್ದಾರೆ. ನಂತರ ಸಂತ್ರಸ್ತೆಯ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡಲು ಶುರುಮಾಡಿದ್ದಾರೆ. ಶಾಸಕ ಪ್ರಭು ಚೌಹಾಣ್ ಕೂಡ ಸಂತ್ರಸ್ತೆಯನ್ನು “ನನ್ನ ಮಗಳಂತೆ” ಎಂದಿದ್ದರೂ, ಅವರ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತ್ರಸ್ತೆಯ ಆರೋಪದ ಪ್ರಕಾರ, ಶಿರಡಿಯಲ್ಲಿ ಪ್ರತೀಕ್ ತಮ್ಮನ್ನು ಒಂದು ಕೊಠಡಿಯಲ್ಲಿ ಇರಿಸಿ, ಇನ್ನೊಂದು ಯುವತಿಯ ಜೊತೆಗಿದ್ದಾರೆ. ಆ ಸಂದರ್ಭದಲ್ಲೂ ಕೂಡ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. “ನಾನು ಯಾರ ಜೊತೆಗೂ ವಿಡಿಯೋ ಕಾಲ್ ಅಥವಾ ಚಾಟಿಂಗ್ ಮಾಡಿಲ್ಲ. ಆದರೆ, ಟೆಕ್ನಾಲಜಿಯನ್ನು ಬಳಸಿ ತಪ್ಪು ಚಿತ್ರಣ ಸೃಷ್ಟಿಸಲಾಗಿದೆ,” ಎಂದು ಸಂತ್ರಸ್ತೆ ಹೇಳಿದ್ದಾರೆ. ಜೊತೆಗೆ, ತಮ್ಮ ಫೋನ್‌ನನ್ನು ಪ್ರತೀಕ್ ನಾಲ್ಕು ತಿಂಗಳ ಕಾಲ ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ಪ್ರತೀಕ್‌ಗೆ ಹಲವಾರು ಯುವತಿಯರ ಜೊತೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿರುವ ಸಂತ್ರಸ್ತೆ, ತಮಗೆ ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ. “ನನಗೆ ನ್ಯಾಯ ಸಿಗದಿದ್ದರೆ, ನಾವು ಮನೆಯವರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಪ್ರಭು ಚೌಹಾಣ್ ಕಡೆಯವರಿಂದ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ. “ಅವರು ನಮ್ಮನ್ನು ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ, ನಮಗೆ ಪೊಲೀಸ್ ಭದ್ರತೆ ಬೇಕು,” ಎಂದು ಮನವಿ ಮಾಡಿದ್ದಾರೆ.
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿ ಮಹಿಳಾ ಆಯೋಗಕ್ಕೆ ದೂರು ಕೊಡಿಸಿದ್ದಾರೆ ಎಂಬ ಪ್ರಭು ಚೌಹಾಣ್‌ರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತೆ, “ಯಾವುದೇ ರಾಜಕಾರಣಿಗಳು ದೂರು ಕೊಡಲು ಒತ್ತಾಯಿಸಿಲ್ಲ. ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಬೀದರ್ ಎಸ್‌ಪಿ ಪ್ರದೀಪ್ ಗುಂಟೆ ಸಹಾಯ ಮಾಡಿದ್ದಾರೆ,” ಎಂದು ಸ್ಪಷ್ಟಪಡಿಸಿದ್ದಾರೆ.
ತಮಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎಂದು ಸಂತ್ರಸ್ತೆ ಹೇಳಿದ್ದಾರೆ. “ಬೀದರ್ ಪೊಲೀಸರು ನನಗೆ ನ್ಯಾಯ ಕೊಡಿಸುತ್ತಾರೆ ಎಂಬ ಭರವಸೆ ಇದೆ,” ಎಂದು ತಿಳಿಸಿದ್ದಾರೆ.