ಬಾಗಲಕೋಟೆ-ದಾವಣಗೆರೆ ಬೈ ಎಲೆಕ್ಷನ್‌‌: ನಾಳೆ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ

Untitled design 2026 04 08T194927.374

ಬೆಂಗಳೂರು, ಏಪ್ರಿಲ್ 8: ಕರ್ನಾಟಕದ ಬಾಗಲಕೋಟೆ (24) ಮತ್ತು ದಾವಣಗೆರೆ ದಕ್ಷಿಣ (107) ವಿಧಾನಸಭಾ ಕ್ಷೇತ್ರಗಳಿಗೆ ನಾಳೆ (ಏಪ್ರಿಲ್ 9, ಗುರುವಾರ) ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ, ಮತದಾನದ ದಿನದಂದು ಸರ್ಕಾರಿ ಮತ್ತು ಖಾಸಗಿ ಎಲ್ಲಾ ಕಚೇರಿಗಳು, ಶಾಲಾ-ಕಾಲೇಜುಗಳು, ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ. ಕರ್ನಾಟಕ ಸರ್ಕಾರವು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಮತದಾರರು ತಮ್ಮ ಮತದ ಹಕ್ಕನ್ನು ಸುಲಭವಾಗಿ ಚಲಾಯಿಸಲು ಈ ಸೌಲಭ್ಯ ಕಲ್ಪಿಸಲಾಗಿದೆ.

ರಜೆ ಎಲ್ಲಿ ಅನ್ವಯ?

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಾತ್ರ ಈ ರಜೆ ಅನ್ವಯವಾಗಲಿದೆ. ಈ ಪ್ರದೇಶಗಳಲ್ಲಿನ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು, ಅನುದಾನಿತ ಮತ್ತು ಅನುದಾನಿತ ಶಾಲಾ-ಕಾಲೇಜುಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಜೀವವಿಮಾ ನಿಗಮ (LIC), ಹಣಕಾಸು ಸಂಸ್ಥೆಗಳು ಹಾಗೂ ಖಾಸಗಿ ಔದ್ಯಮಿಕ ಮತ್ತು ವಾಣಿಜ್ಯ ಸಂಸ್ಥೆಗಳು ಬಂದ್ ಆಗಲಿವೆ. ದಿನಗೂಲಿ ಕಾರ್ಮಿಕರು, ತಾತ್ಕಾಲಿಕ ನೌಕರರು ಮತ್ತು ಖಾಯಂ ಉದ್ಯೋಗಿಗಳು ಸೇರಿದಂತೆ ಎಲ್ಲಾ ಮತದಾರರಿಗೆ ವೇತನ ಸಹಿತ ರಜೆ ಕಡ್ಡಾಯವಾಗಿದೆ.

ಚುನಾವಣಾ ಆಯೋಗದ ಕಡ್ಡಾಯ ಮಾರ್ಗಸೂಚಿ

ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 135B ಅಡಿಯಲ್ಲಿ ಚುನಾವಣಾ ಆಯೋಗವು ಈ ರಜೆಯನ್ನು ಮಂಜೂರು ಮಾಡಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಯಾರೂ ತಮ್ಮ ಹಕ್ಕು ವಂಚಿತರಾಗದಂತೆ ನೋಡಿಕೊಳ್ಳುವುದು ಉದ್ದೇಶ. ವೇತನ ಕಡಿತದ ಭಯದಿಂದ ಅನೇಕರು ಮತದಾನದಿಂದ ದೂರ ಉಳಿಯುತ್ತಿದ್ದರು. ಆದ್ದರಿಂದ ಆಯೋಗವು ಖಾಸಗಿ ಕಂಪನಿಗಳು, ಕೈಗಾರಿಕೆಗಳು, ದಿನಗೂಲಿ ಕಾರ್ಮಿಕರು ಮತ್ತು ತಾತ್ಕಾಲಿಕ ನೌಕರರಿಗೂ ವೇತನ ಸಹಿತ ರಜೆ ನೀಡುವುದನ್ನು ಕಡ್ಡಾಯಗೊಳಿಸಿದೆ. ನೌಕರನು ತನ್ನ ಕ್ಷೇತ್ರದ ಹೊರಗೆ ಕೆಲಸ ಮಾಡುತ್ತಿದ್ದರೂ ಸಹ, ಮತದಾನದ ದಿನದಂದು ಅವನಿಗೆ ರಜೆ ನೀಡಬೇಕು. ನಿಯಮ ಉಲ್ಲಂಘಿಸಿದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ರಾಜ್ಯದಲ್ಲಿ ಎರಡು ಕ್ಷೇತ್ರ, ದೇಶದಲ್ಲಿ ಏಕಕಾಲಿಕ ಮತದಾನ

ನಾಳೆ ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ಮಾತ್ರವಲ್ಲ, ಅಸ್ಸಾಂ, ಕೇರಳ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಮತದಾನ ನಿಗದಿಯಾಗಿದೆ. ಕರ್ನಾಟಕದ ಈ ಎರಡು ಕ್ಷೇತ್ರಗಳಲ್ಲೂ ಅತ್ಯಂತ ಸ್ಪರ್ಧಾತ್ಮಕ ಚುನಾವಣೆಯಾಗುವ ಸಾಧ್ಯತೆಯಿದೆ.

ದಾವಣಗೆರೆಯಲ್ಲಿ 76 ಮತಗಟ್ಟೆಗಳು

ದಾವಣಗೆರೆ ದಕ್ಷಿಣ ಕ್ಷೇತ್ರದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 234 ಮತಗಟ್ಟೆಗಳಿದ್ದು, ಉಳಿದಂತೆ 50 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಒಟ್ಟು ಮತಗಟ್ಟೆಗಳಲ್ಲಿ 76 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಕೇಂದ್ರ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. 

ಮತದಾರರಿಗೆ ಮನವಿ

ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತವು ಎಲ್ಲಾ ಮತದಾರರು ಆತಂಕವಿಲ್ಲದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಮನವಿ ಮಾಡಿದೆ. ಮತದಾನ ಕೇಂದ್ರಗಳು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತವೆ. ಮತದಾರರು ತಮ್ಮ ಗುರುತಿನ ಚೀಟಿ (ವೋಟರ್ ಐಡಿ) ಕಡ್ಡಾಯವಾಗಿ ಕೊಂಡೊಯ್ಯಬೇಕು. ರಜೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಆಯೋಗ ಕೋರಿದೆ.

Exit mobile version