ವಿದ್ಯಾರ್ಥಿಗಳೇ ಗಮನಿಸಿ! ದ್ವಿತೀಯ ಪಿಯುಸಿ ಫಲಿತಾಂಶದ ಅಧಿಕೃತ ದಿನಾಂಕ ಪ್ರಕಟ

Untitled design (84)

ಬೆಂಗಳೂರು: ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶಕ್ಕೆ ಅಧಿಕೃತ ದಿನಾಂಕ ನಿಗದಿಯಾಗಿದೆ. ಇಂದು (ಏಪ್ರಿಲ್ 7) ಪ್ರಕಟವಾಗಬೇಕಿದ್ದ ಫಲಿತಾಂಶವು ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದು, ಈಗ ಏಪ್ರಿಲ್ 9ರಂದು ಅಧಿಕೃತವಾಗಿ ಹೊರಬೀಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಹಿರಿಯ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

ಈ ಬಾರಿ ಶಿಕ್ಷಣ ಇಲಾಖೆಯು ಅತ್ಯಂತ ವೇಗವಾಗಿ ಮೌಲ್ಯಮಾಪನ ಪ್ರಕ್ರಿಯೆ ಮುಗಿಸಿ ಏಪ್ರಿಲ್ 7ಕ್ಕೇ ಫಲಿತಾಂಶ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಏಪ್ರಿಲ್ 9ರಂದು ಈ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ನೀತಿ ಸಂಹಿತೆ ಜಾರಿಯಲ್ಲಿರುವಾಗ ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗದ ಅನುಮತಿ ಕಡ್ಡಾಯ. ಈ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬದಿಂದಾಗಿ ಮಂಡಳಿಯು ಈಗ ಏಪ್ರಿಲ್ 9ರಂದು ಫಲಿತಾಂಶ ನೀಡಲು ಮುಂದಾಗಿದೆ.

ಈ ವರ್ಷ ಫೆಬ್ರವರಿ 28 ರಿಂದ ಮಾರ್ಚ್ 17ರ ವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರಾಜ್ಯಾದ್ಯಂತ 7,10,363ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದಾರೆ. ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ಫಲಿತಾಂಶ ನೀಡುವ ಮೂಲಕ ದಾಖಲೆ ಬರೆಯಲು ಸಜ್ಜಾಗಿರುವ ಮಂಡಳಿಯು, ಈಗ ಅಂತಿಮ ಹಂತದ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಇಂದು ಬೆಳಿಗ್ಗೆಯಿಂದಲೇ ಫಲಿತಾಂಶಕ್ಕಾಗಿ ವೆಬ್‌ಸೈಟ್‌ನಲ್ಲಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಈ ಸುದ್ದಿ ತುಸು ಸಮಾಧಾನ ತಂದಿದೆ.

ಫಲಿತಾಂಶ ನೋಡುವುದು ಹೇಗೆ ?

ಏಪ್ರಿಲ್ 9ರಂದು ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಅಂಕಗಳನ್ನು ಪರಿಶೀಲಿಸಬಹುದು.

  1. ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.

  2. ಮುಖಪುಟದಲ್ಲಿ ‘2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.

  3. ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕ (DOB) ಅನ್ನು ನಮೂದಿಸಿ.

  4. ‘Submit’ ಬಟನ್ ಒತ್ತಿದ ಕೂಡಲೇ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ.

ವಿದ್ಯಾರ್ಥಿಗಳು ಯಾವುದೇ ಅನಾಮಧೇಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದೆ, ಮಂಡಳಿಯ ಅಧಿಕೃತ ಪೋರ್ಟಲ್ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಫಲಿತಾಂಶದ ದಿನದಂದು ಸಂಭವಿಸಬಹುದಾದ ಸರ್ವರ್ ಸಮಸ್ಯೆಯನ್ನು ತಡೆಗಟ್ಟಲು ಹೆಚ್ಚುವರಿ ಸರ್ವರ್‌ಗಳ ವ್ಯವಸ್ಥೆಯನ್ನೂ ಇಲಾಖೆ ಮಾಡಿಕೊಂಡಿದೆ.

Exit mobile version