ಡಿಕೆಶಿ ತೆಕ್ಕೆಯಲ್ಲಿದ್ದ ನಗರಾಭಿವೃದ್ಧಿ ಖಾತೆ ಯಾರ ಪಾಲು..? ಶುರುವಾಗಿದೆ ಭರ್ಜರಿ ಲಾಬಿ..!

ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಮತ್ತೊಂದು ತಲೆನೋವು ಆರಂಭವಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯು ಯಾರ ಪಾಲಾಗುತ್ತದೆ ಎಂಬುದು ಪಕ್ಷದಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ.

ಕಳೆದ ಮೂರು ವರ್ಷಗಳಿಂದ ಜಲ ಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿಗಾಗಿ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದ್ದಾರೆ. ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಆಥಾರಿಟಿ (ಜಿಬಿಎ) ಆಗಿ ಮಾಡಿದ್ದು ಅವರ ಪ್ರಮುಖ ಸಾಧನೆಯಾಗಿದೆ.

ತಮ್ಮ ಯೋಜನೆಗಳು ಪೂರ್ಣಗೊಳ್ಳುವವರೆಗೆ ಈ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬೆಂಗಳೂರು ಉಸ್ತುವಾರಿ ತಮ್ಮಲ್ಲೇ ಇಟ್ಟುಕೊಂಡಿದ್ದರು. ಈಗ ಡಿ.ಕೆ. ಶಿವಕುಮಾರ್ ಅವರು ಅದೇ ಹಾದಿ ಹಿಡಿಯುತ್ತಾರಾ ಎಂಬ ಕುತೂಹಲವಿದೆ. ಆದರೆ ಸಿಎಂ ಹುದ್ದೆಯ ಜೊತೆಗೆ ಬೆಂಗಳೂರು ಅಭಿವೃದ್ಧಿ ಖಾತೆಯ ಜವಾಬ್ದಾರಿ ಹೊರೆಯುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯವೂ ಇದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬೆಂಗಳೂರು ಶಾಸಕರ ನಡುವೆ ತೀವ್ರ ಪೈಪೋಟಿ ಏರಿದೆ. ಈಗಾಗಲೇ ರಾಮಲಿಂಗಾರೆಡ್ಡಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬೆಂಗಳೂರು ರಾಜಕೀಯದ ಚಾಣಕ್ಯ ಎಂದು ಪರಿಗಣಿತರಾಗಿರುವ ರಾಮಲಿಂಗಾರೆಡ್ಡಿ ಅವರಿಗೆ ಖಾತೆ ಸಿಗುವ ಸಾಧ್ಯತೆ ಚರ್ಚೆಯಲ್ಲಿದೆ.

ಇನ್ನೊಂದು ಬಲವಾದ ಹೆಸರು ಕೃಷ್ಣ ಬೈರೇಗೌಡ. ಆಡಳಿತಾತ್ಮಕ ಅನುಭವ ಮತ್ತು ಕ್ಲೀನ್ ಇಮೇಜ್‌ನಿಂದಾಗಿ ಅವರ ಹೆಸರು ಮುಂಚೂಣಿಯಲ್ಲಿದೆ. ಐಟಿ-ಬಿಟಿ ವಲಯ ಮತ್ತು ಯುವ ಜನತೆಯನ್ನು ಆಕರ್ಷಿಸುವಲ್ಲಿ ಅವರು ಸೂಕ್ತ ಎಂಬ ಲೆಕ್ಕಾಚಾರವೂ ಇದೆ.ಹಿರಿಯ ನಾಯಕರಾದ ದಿನೇಶ್ ಗುಂಡೂರಾವ್ ಮತ್ತು ಜಿ. ಪರಮೇಶ್ವರ್ ಅವರ ಹೆಸರುಗಳೂ ರೇಸ್‌ನಲ್ಲಿವೆ.

ಆಗಸ್ಟ್‌ನೊಳಗೆ ಜಿಬಿಎ ಚುನಾವಣೆ ನಡೆಸಬೇಕಿದ್ದು, ಸುಪ್ರೀಂ ಕೋರ್ಟ್ ಸಹ ಆದೇಶ ನೀಡಿದೆ. ಈ ಅನಿರ್ವಾಯ ಪರಿಸ್ಥಿತಿಯಲ್ಲಿ ಬೆಂಗಳೂರು ಉಸ್ತುವಾರಿ ಖಾತೆಯನ್ನು ಅನುಭವಿ ನಾಯಕರಿಗೆ ನೀಡುವ ಸಾಧ್ಯತೆ ಹೆಚ್ಚಿದೆ.ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಯ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿದ್ದಾರೆ.

ಖಾತೆಯನ್ನು ತಮ್ಮ ಬಳಿ ಉಳಿಸಿಕೊಳ್ಳುವುದು, ಅಥವಾ ವಿಶ್ವಾಸಾರ್ಹ ನಾಯಕರಿಗೆ ನೀಡುವುದು ಯಾವುದು ಉತ್ತಮ ಎಂಬ ನಿರ್ಧಾರವನ್ನು ಅವರು ಶೀಘ್ರವೇ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯು ಕರ್ನಾಟಕ ರಾಜಕೀಯದಲ್ಲಿ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ಖಾತೆಯಾಗಿದ್ದು, ಯಾರಿಗೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 

Exit mobile version