ಆಸ್ಪತ್ರೆಯಲ್ಲಿ ವೈದ್ಯರ ಯಡವಟ್ಟು..! ಹಲ್ಲಿನ ಚಿಕಿತ್ಸೆಗೆ ಹೋದ ಮಹಿಳೆ ಕೋಮಾಗೆ ಶಿಫ್ಟ್‌

Untitled design 2026 02 18T111201.339

ಕಲಬುರಗಿ: ದವಡೆ ಹಲ್ಲಿನ ನೋವಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳಿದ್ದ ಮಹಿಳೆಯೊಬ್ಬರು ಇಂದು ಕೋಮಾ ಸ್ಥಿತಿಯಲ್ಲಿ (Coma) ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಇಂಜೆಕ್ಷನ್ ನೀಡಿದ ಕೆಲವೇ ನಿಮಿಷಗಳಲ್ಲಿ ಅನಾಹುತ

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಖಾಜಾ ಕಾಲೋನಿಯ ನಿವಾಸಿ ನಾಜಿಯಾ ಬೇಗಂ ಈ ದುರಂತದ ಸಂತ್ರಸ್ತೆ. ಪತಿಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದ ನಾಜಿಯಾ, ತನ್ನ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಜೀವನ ನಡೆಸುತ್ತಿದ್ದರು. ಕಳೆದ ಜನವರಿ 1ರಂದು ತೀವ್ರ ಹಲ್ಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 2ರಂದು ದವಡೆ ಹಲ್ಲು ತೆಗೆಯಲು ವೈದ್ಯರು ಸಿದ್ಧತೆ ನಡೆಸಿದ್ದರು. ಆದರೆ, ಶಸ್ತ್ರಚಿಕಿತ್ಸೆಗೂ ಮುನ್ನ ನೀಡಲಾದ ಅನಸ್ತೇಶಿಯಾ (Anesthesia) ಇಂಜೆಕ್ಷನಿಂದ ಭಾರಿ ಎಡವಟ್ಟಾಗಿದೆ. ಇಂಜೆಕ್ಷನ್ ನೀಡಿದ ಕೆಲವೇ ನಿಮಿಷಗಳಲ್ಲಿ ನಾಜಿಯಾ ಆರೋಗ್ಯದಲ್ಲಿ ಏರುಪೇರಾಗಿ ಅವರು ಕೋಮಾಗೆ ಜಾರಿದ್ದಾರೆ.

ಕಳೆದ 45 ದಿನಗಳಿಂದ ನಾಜಿಯಾ ಬೇಗಂ ಆಸ್ಪತ್ರೆಯ ಬೆಡ್ ಮೇಲೆ ಅಲುಗಾಡದ ಸ್ಥಿತಿಯಲ್ಲಿ ಮಲಗಿದ್ದಾರೆ. ವೈದ್ಯರ ಯಡವಟ್ಟಿನಿಂದ ಈ ಸ್ಥಿತಿ ಬಂದಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರೆ, ವೈದ್ಯರು ಮಾತ್ರ ಇದರಲ್ಲಿ ನಮ್ಮ ತಪ್ಪಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ತಪ್ಪು ತಿದ್ದಿಕೊಳ್ಳುವಂತೆ ಆಸ್ಪತ್ರೆ ಆಡಳಿತ ಮಂಡಳಿಯೇ ಸುಮಾರು 8 ಲಕ್ಷ ರೂಪಾಯಿಗೂ ಅಧಿಕ ಚಿಕಿತ್ಸಾ ವೆಚ್ಚವನ್ನು ಭರಿಸಿದೆ. ಆದರೆ, ಈಗ ಇಲ್ಲಿ ಚಿಕಿತ್ಸೆ ಸಾಧ್ಯವಿಲ್ಲ, ಉನ್ನತ ಚಿಕಿತ್ಸೆಗಾಗಿ ಹೈದರಾಬಾದ್ ಅಥವಾ ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಿರುವುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ.

ನಾಜಿಯಾ ಅವರಿಗೆ ಫಿಜಿಯೋಥೆರಫಿ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಈಗಾಗಲೇ ಪತಿಯನ್ನು ಕಳೆದುಕೊಂಡು ಅನಾಥರಂತಿರುವ ಇಬ್ಬರು ಪುಟ್ಟ ಮಕ್ಕಳು, ಈಗ ತಾಯಿಯ ಸ್ಥಿತಿಯನ್ನು ನೋಡಿ ಕಣ್ಣೀರಿಡುತ್ತಿದ್ದಾರೆ. ಬಡ ಕುಟುಂಬಕ್ಕೆ ಇನ್ನು ಮುಂದಿನ ಚಿಕಿತ್ಸಾ ವೆಚ್ಚ ಭರಿಸುವುದು ಅಸಾಧ್ಯದ ಮಾತು. ಜಿಲ್ಲಾ ಆರೋಗ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Exit mobile version