ಕಲಬುರಗಿಯಲ್ಲಿ ಬೆಳ್ಳಂ ಬೆಳಗ್ಗೆ ಭೂಕಂಪದ ಅನುಭವ: ಮನೆಯಿಂದ ಹೊರಬಂದ ಜನರು

Untitled design 2025 10 20t105057.519

ಕಲಬುರಗಿ, ಅ.20: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಶಿರೊಳ್ಳಿ ಗ್ರಾಮದಲ್ಲಿ ಇಂದು (ಅಕ್ಟೋಬರ್ 20) ಬೆಳಗ್ಗೆ 8 ಗಂಟೆ ಸುಮಾರಿಗೆ ಜನರು ಭೂಮಿ ಕಂಪಿದಂತೆ ಅನುಭವಿಸಿದ್ದಾರೆ. ಬೆಳಗಿನ ಸಮಯದಲ್ಲಿ ಎರಡು ಸಣ್ಣ ಕಂಪನಗಳು ಒಂದೇ ಪ್ರದೇಶದಲ್ಲಿ ಸಂಭವಿಸಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ಹಬ್ಬದ ಸಂಭ್ರಮದಲ್ಲಿದ್ದ ಶಿರೊಳ್ಳಿ ಗ್ರಾಮಸ್ಥರು ಈ ಅಘಟನೆಯಿಂದ ಬೆಚ್ಚಿಬಿದ್ದಿದ್ದಾರೆ. ಭೂಕಂಪನದ ಅನುಭವ ಆಗುವಾಗ ಮನೆಗಳಲ್ಲಿನ ವಸ್ತುಗಳು ಅಲುಗಾಡಿದವು, ಕೆಲವು ಕಡೆ ಪಾತ್ರೆ-ಬಾಣಲೆಗಳು ಜೋರಾಗಿ ಚಲಿಸಿದವು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಮನೆ ಬಿಟ್ಟು ಬಯಲು ಪ್ರದೇಶಗಳಿಗೆ ಓಡಿ ಹೋಗಿದ್ದಾರೆ. ಹಲವರು ಭೂಕಂಪನದ ಭೀತಿಯಿಂದ ಬಯಲು ಪ್ರದೇಶಗಳಲ್ಲಿ ಉಳಿದುಕೊಂಡಿದ್ದಾರೆ.

ಗ್ರಾಮಸ್ಥರ ಪ್ರಕಾರ, ಬೆಳಗ್ಗೆ 8 ಗಂಟೆ ಸುಮಾರಿಗೆ ಮೊದಲ ಕಂಪನ ಸುಮಾರು 3-4 ಸೆಕೆಂಡುಗಳವರೆಗೆ ಮುಂದುವರಿದಿತ್ತು. ಸುಮಾರು 10 ನಿಮಿಷಗಳ ನಂತರ ಮತ್ತೊಮ್ಮೆ ಸಣ್ಣ ಪ್ರಮಾಣದ ಕಂಪನ ಕಂಡುಬಂದಿದೆ ಎಂದು ತಿಳಿಸಿದ್ದಾರೆ. “ಮೊದಲ ಕಂಪನದ ನಂತರ ಭಯಗೊಂಡು ಹೊರಬಂದಿದ್ದೆವು, ಎರಡನೇ ಕಂಪನ ಆಗುತ್ತಿದ್ದಂತೆಯೇ ಎಲ್ಲರೂ ಕಿರುಚಿಕೊಂಡು ಓಡಿದರು,” ಎಂದು ಸ್ಥಳೀಯ ನಿವಾಸಿ ಹೇಳಿದ್ದಾರೆ.

ಘಟನೆಯ ಬಗ್ಗೆ ತಿಳಿದು, ಚಿಂಚೋಳಿ ತಾಲೂಕು ಆಡಳಿತ, ಪೊಲೀಸ್ ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿವೆ. ಪ್ರಾಥಮಿಕ ವರದಿ ಪ್ರಕಾರ ಯಾವುದೇ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ ಹಾಗೂ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version