ಹಾಡಹಗಲೇ ಗುಂಡು ಹಾರಿಸಿ, ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊ*ಲೆ

Untitled design 2026 04 20T193011.502

ಕಲಬುರಗಿ, ಏಪ್ರಿಲ್ 20: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಹಾಡಹಗಲೇ ಗುಂಡಿನ ಸದ್ದು ಕೇಳಿಬಂದಿದ್ದು, ನಂತರ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ‘ಭಾಯ್ ಭಾಯ್’ ಗುಂಪಿನ ಮುಖಂಡ ಇರ್ಫಾನ್ (42) ಎಂಬಾತನನ್ನು ಮೊದಲು ಗುಂಡು ಹಾರಿಸಿ, ನಂತರ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಘಟನೆಯ ವಿವರ
ಮಧ್ಯಾಹ್ನದ ವೇಳೆ ಇರ್ಫಾನ್ ತನ್ನ ಬೈಕ್‌ನಲ್ಲಿ ಬಲರಾಮ್ ಚೌಕ್ ಬಳಿ ಸೇವಾಲಾಲ್ ಮಂದಿರದ ಹತ್ತಿರ ಹೋಗುತ್ತಿದ್ದಾಗ, ಕೆಲವು ದುಷ್ಕರ್ಮಿಗಳು ಅವನನ್ನು ಅಡ್ಡಗಟ್ಟಿ, ಮೊದಲು ಇರ್ಫಾನ್ ಮೇಲೆ ಗುಂಡು ಹಾರಿಸಿದರು. ಅವನು ನೆಲಕ್ಕೆ ಕುಸಿದ ಬಳಿಕ ಮಚ್ಚು ಸೇರಿದಂತೆ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿದರು. ರಕ್ತದ ಮಡುವಿನಲ್ಲಿ ಬಿದ್ದ ಇರ್ಫಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುಷ್ಕರ್ಮಿಗಳು ಘಟನಾ ಸ್ಥಳದಿಂದ ಕೂಡಲೇ ಪರಾರಿಯಾಗಿದ್ದಾರೆ.

ಹಳೇ ವೈಷಮ್ಯದ ಶಂಕೆ
ಇರ್ಫಾನ್ ವಾಡಿ ಪಟ್ಟಣದ ‘ಭಾಯ್ ಭಾಯ್’ ಗುಂಪಿನ ಮುಖಂಡನಾಗಿದ್ದ. ಪ್ರಾಥಮಿಕ ತನಿಖೆಯಲ್ಲಿ ಹಳೇ ವೈಷಮ್ಯದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿಂದೆಯೂ ಇರ್ಫಾನ್ ವಿರುದ್ಧ ಕೆಲವು ಗುಂಪುಗಳೊಂದಿಗೆ ಹಳೇ ವೈಷಮ್ಯ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊಲೆಯ ಸ್ಥಳದಲ್ಲಿ ಪೊಲೀಸರು ಮಚ್ಚು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ತನಿಖೆ
ಘಟನೆಯ ಮಾಹಿತಿ ತಿಳಿದ ತಕ್ಷಣ ವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಸ್ಥಳವನ್ನು ಸುತ್ತುವರಿದು ಪರಿಶೀಲನೆ ನಡೆಸಿದರು. ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಹೆಚ್ಚುವರಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. 

ಕಲಬುರಗಿಯ ಹತ್ಯೆ ಪ್ರಕರಣದಲ್ಲಿ ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಪೊಲೀಸರು ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದಾರೆ.

Exit mobile version