ಕಲಬುರಗಿಯ ಸೆಂಟ್ರಲ್ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್.!

ಇರ್ತೀರಾ (11)

ಕಲಬುರಗಿ: ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಮಧ್ಯರಾತ್ರಿ ಪರಾರಿಯಾಗಿರುವ ಘಟನೆ ನಡೆದಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಮಸ್ತಾನ್, ಸಂತೋಷ್ ಹಾಗೂ ಸಾಗರ್ ಎಂಬ ಮೂವರು ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ.

ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆಯಲ್ಲಿ ಮೂವರು ಕೈದಿಗಳು ಜೈಲಿನ ಕಂಪೌಂಡ್ ಗೋಡೆ ಹಾರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಜೈಲಿನೊಳಗೆ ಕಠಿಣ ಭದ್ರತಾ ವ್ಯವಸ್ಥೆ ಇದ್ದರೂ ಕೈದಿಗಳು ತಪ್ಪಿಸಿಕೊಂಡಿರುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ಕೈದಿಗಳು ಪರಾರಿಯಾಗಲು ಜೈಲು ಸಿಬ್ಬಂದಿಯೇ ಸಹಕಾರ ನೀಡಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಕೈದಿಗಳನ್ನು ಲಾಕಪ್‌ನಲ್ಲಿ ಇರಿಸಲಾಗುತ್ತದೆ. ಆದರೆ ಈ ವೇಳೆ ಅವರು ಹೊರಗೆ ಬಂದಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ಒಳಗಿನವರ ಸಹಾಯ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆ ಸಂಬಂಧ ಫರಹತ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಕೈದಿಗಳ ಪತ್ತೆಗೆ ಜೈಲು ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದ್ದು, ಕೈದಿಗಳ ಸಂಪರ್ಕ ಹಾಗೂ ಪರಾರಿಯ ಮಾರ್ಗದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

ಇದರ ಬೆನ್ನಲ್ಲೇ ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಆರೋಪಿಯ ಪರಾರಿ ಪ್ರಕರಣವೂ ಬೆಳಕಿಗೆ ಬಂದಿದೆ. ಜುಲೈ 3ರಂದು ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೊ ಪ್ರಕರಣದ ಆರೋಪಿ ಮಂಜುನಾಥ್ ಪರಾರಿಯಾಗಿದ್ದ. ಪ್ರಕರಣ ದಾಖಲಾದ ಬಳಿಕ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆತರಲಾಗಿತ್ತು. ಆದರೆ ಪೊಲೀಸ್ ಠಾಣೆಯಿಂದಲೇ ಆರೋಪಿ ತಪ್ಪಿಸಿಕೊಂಡಿರುವುದು ಕೂಡ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಎದ್ದಿದೆ.

Exit mobile version