ಮಂಗಳೂರು: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಯವರು ತಮ್ಮ ಆಧ್ಯಾತ್ಮಿಕ ಭಕ್ತಿಯ ಮೂಲಕ ತುಳುನಾಡಿನ ದೈವಾರಾಧನೆಗೆ ತಲೆಬಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದ ರೆಡ್ಡಿಯವರು, ಇರುವೆರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಗಳಿಗೆ ತಂಬಿಲ ಸೇವೆ ಸಲ್ಲಿಸಿದರು.
ಕಳೆದ ಮೇ 13, 2025ರಂದು ಆರೇಲ್ತಡಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಾರಂಭ ಜರುಗಿತ್ತು. ಈ ಕಾರ್ಯಕ್ರಮಕ್ಕೆ ಗಾಲಿ ಜನಾರ್ದನ ರೆಡ್ಡಿಯವರು ಆಗಮಿಸಬೇಕಿತ್ತು. ಆದರೆ, ಆಂಧ್ರಪ್ರದೇಶದ ಓಬಳಾಪುರಂನಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 6, 2025ರಂದು ರೆಡ್ಡಿಯವರು ಮತ್ತೆ ಜೈಲುಪಾಲಾಗಿದ್ದರು. ಕಾನೂನಿನ ಕುಣಿಕೆಗೆ ಸಿಲುಕಿದ್ದರಿಂದ ಅವರಿಗೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ನಂತರ ರೆಡ್ಡಿಯವರ ಆಪ್ತರು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ದೈವದ ಬಳಿ ಮೊರೆಯಿಟ್ಟಿದ್ದರು. ಜೈಲಿನಿಂದ ಬಿಡುಗಡೆಗಾಗಿ ದೈವದ ಆಶೀರ್ವಾದ ಕೋರಿದ್ದ ಅವರಿಗೆ, ಕೆಡೆಂಜೋಡಿತ್ತಾಯಿ ದೈವವು ಒಂದು ತಿಂಗಳ ಒಳಗೆ ರೆಡ್ಡಿಯವರು ಬಿಡುಗಡೆಯಾಗುವುದಾಗಿ ಅಭಯ ನೀಡಿತ್ತು.
ದೈವದ ನುಡಿಯಂತೆ, ಒಂದು ತಿಂಗಳ ಒಳಗೆ ಗಾಲಿ ಜನಾರ್ದನ ರೆಡ್ಡಿಯವರು ಜೈಲಿನಿಂದ ಬಿಡುಗಡೆಯಾದರು. ಈ ದೈವಿಕ ಶಕ್ತಿಯ ಆಶೀರ್ವಾದಕ್ಕೆ ಕೃತಜ್ಞತೆ ಸಲ್ಲಿಸಲು, ಬಿಡುಗಡೆಯ ಒಂದೂವರೆ ತಿಂಗಳ ನಂತರ ರೆಡ್ಡಿಯವರು ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದರು. ವಿಶೇಷವಾಗಿ, ಸಂಕ್ರಮಣದ ಶುಭ ದಿನದಂದು ಈ ಭೇಟಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ತಂಬಿಲ ಸೇವೆ ಸಲ್ಲಿಸಿ, ದೈವದ ಆಶೀರ್ವಾದವನ್ನು ಪಡೆದರು.
ಈ ಭೇಟಿಯಲ್ಲಿ ರೆಡ್ಡಿಯವರಿಗೆ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮತ್ತು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸಾಥ್ ನೀಡಿದರು.
