ಹಾವೇರಿ: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷವು ಈಗ ಭಾರತದ ಕೃಷಿ ಮತ್ತು ಆರ್ಥಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ರಫ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದರ ಜೊತೆಗೇ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆಯಿಂದಾಗಿ ಭಾರತೀಯ ರೂಪಾಯಿ ಮೌಲ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಕಾಲಿಕ ಕುಸಿತ ಕಂಡಿದೆ.
ವಿಶ್ವದ ವಿವಿಧ ದೇಶಗಳಿಗೆ ಮಸಾಲೆ ಮತ್ತು ಸೌಂದರ್ಯವರ್ಧಕಗಳ ತಯಾರಿಕೆಗಾಗಿ ರಫ್ತಾಗುವ ಬ್ಯಾಡಗಿ ಮೆಣಸಿನಕಾಯಿಗೆ ಈಗ ಸಾಗಾಟದ ಸಂಕಷ್ಟ ಎದುರಾಗಿದೆ. ಮಲೇಶಿಯಾ, ಅಮೆರಿಕ, ಇಸ್ರೇಲ್ ಸೇರಿದಂತೆ ಹತ್ತಾರು ದೇಶಗಳಿಗೆ ಕಳುಹಿಸಲು ಬಳಸುವ ಕಂಟೇನರ್‌ಗಳ ಬಾಡಿಗೆ ದರ ಗಗನಕ್ಕೇರಿದೆ. ಯುದ್ಧದ ಭೀತಿಯಿಂದಾಗಿ ಈ ಹಿಂದೆ ಒಂದು ಕಂಟೇನರ್‌ಗೆ 1,800 ಡಾಲರ್ ಇದ್ದ ಬಾಡಿಗೆ ಈಗ ಬರೋಬ್ಬರಿ 3,500 ಡಾಲರ್‌ಗೂ ಅಧಿಕವಾಗಿದೆ. ಈ ವೆಚ್ಚದ ಏರಿಕೆಯಿಂದಾಗಿ ರಫ್ತು ಪ್ರಕ್ರಿಯೆ ಕುಂಠಿತಗೊಂಡಿದ್ದು, ಮಾರುಕಟ್ಟೆಗೆ ಆವಕ ಹೆಚ್ಚಾಗಿ ದರ ಕುಸಿಯುವ ಭೀತಿ ರೈತರನ್ನು ಕಾಡುತ್ತಿದೆ.
ಪಾತಾಳಕ್ಕೆ ಕುಸಿದ ರೂಪಾಯಿ
ಯುದ್ಧದ ಪರಿಣಾಮ ಕೇವಲ ಕೃಷಿಗೆ ಸೀಮಿತವಾಗಿಲ್ಲ, ಸೋಮವಾರ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು 46 ಪೈಸೆ ಕುಸಿದು 92.20 ರೂಪಾಯಿಗೆ ತಲುಪಿದೆ. ಇದು ಭಾರತದ ಆರ್ಥಿಕ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 25ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 114 ಡಾಲರ್ ತಲುಪಿದೆ. ಇರಾನ್ ಮತ್ತು ಹೋರ್ಮುಜ್ ಸಮುದ್ರಸಂಧಿಯ ಮಾರ್ಗದಲ್ಲಿ ಪೂರೈಕೆ ವ್ಯತ್ಯಯ ಉಂಟಾಗುವ ಭೀತಿ ಇದೆ ಹೀಗಾಗಿ ರೂಪಾಯಿ ಮೌಲ್ಯ ಕುಸಿತದ ಆತಂಕ ಹೆಚ್ಚಿಸಿದೆ.
ಇರಾನ್‌ನಲ್ಲಿ ನಾಯಕತ್ವ ಬದಲಾವಣೆ
ಇರಾನ್‌ನಲ್ಲಿ ಅಲಿ ಖಮೇನಿ ಅವರ ನಂತರ ಅವರ ಪುತ್ರ ಮೊಜ್ತಬಾ ಖಮೇನಿ ಸುಪ್ರೀಂ ಲೀಡರ್ ಆಗಲಿದ್ದಾರೆ ಎಂಬ ಸುದ್ದಿಯು ಜಾಗತಿಕ ಹೂಡಿಕೆದಾರರಲ್ಲಿ ಅಸ್ಥಿರತೆಯ ಭಯವನ್ನು ಮೂಡಿಸಿದೆ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂಬ ಆತಂಕವು ರೂಪಾಯಿ ಕುಸಿತ ಮತ್ತು ತೈಲ ಬೆಲೆ ಏರಿಕೆಗೆ ಪೂರಕವಾಗಿದೆ. ಬ್ಯಾಡಗಿ ಮಾರುಕಟ್ಟೆಗೆ ಬರಬೇಕಿದ್ದ ಆಂಧ್ರ ಮತ್ತು ಬಳ್ಳಾರಿಯ ವ್ಯಾಪಾರಿಗಳು ಕೂಡ ಈಗ ಅಂತರಾಷ್ಟ್ರೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಮೆಣಸಿನಕಾಯಿ ದರದ ಮೇಲೆ ಈ ಯುದ್ಧದ ನೆರಳು ದಟ್ಟವಾಗಿ ಆವರಿಸಿದೆ.
