ಬೆಂಗಳೂರು: ಪ್ರತಿಷ್ಠಿತ ಐಪಿಎಲ್ (IPL 2026) ಪಂದ್ಯಗಳ ಟಿಕೆಟ್‌ಗಾಗಿ ಶಾಸಕರು ಮತ್ತು ಕ್ರಿಕೆಟ್ ಸಂಸ್ಥೆಗಳ ನಡುವೆ ನಡೆಯುತ್ತಿದ್ದ ‘ಟಿಕೆಟ್ ವಾರ್’ಗೆ ಕೊನೆಗೂ ತೆರೆ ಬಿದ್ದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಡೆಸಿದ ಸಂಧಾನ ಸಭೆಯ ಫಲವಾಗಿ, ಇನ್ಮುಂದೆ ಬೆಂಗಳೂರಿನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯಕ್ಕೂ ಶಾಸಕರಿಗೆ ತಲಾ ಮೂರು ಟಿಕೆಟ್ ನೀಡಲು ಕೆಎಸ್‌ಸಿಎ (KSCA) ಮತ್ತು ಆರ್‌ಸಿಬಿ (RCB) ಮ್ಯಾನೇಜ್‌ಮೆಂಟ್ ಸಮ್ಮತಿಸಿವೆ.
ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಹಲವು ಶಾಸಕರು ತಮಗೆ ಐಪಿಎಲ್ ಟಿಕೆಟ್ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ರೀಡಾಂಗಣಕ್ಕೆ ಹೋಗಲು ಬಯಸುವ ನಮಗೆ ಮತ್ತು ನಮ್ಮ ಬೆಂಬಲಿಗರಿಗೆ ಟಿಕೆಟ್ ಒದಗಿಸುವುದು ಕ್ರಿಕೆಟ್ ಸಂಸ್ಥೆಗಳ ಜವಾಬ್ದಾರಿ ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೂ ಚರ್ಚೆ ನಡೆಸಿದ್ದ ಡಿ.ಕೆ. ಶಿವಕುಮಾರ್, ಇಂದು ತಮ್ಮ ಸದಾಶಿವನಗರ ನಿವಾಸದಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಆರ್‌ಸಿಬಿ ಪದಾಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.
Held a meeting with representatives from the Karnataka State Cricket Association, including President Shri Venkatesh Prasad, DNA Entertainment Networks MD Shri Venkat, Chief Communication Officer Shri Vinay Mruthyunjay, and Royal Challengers Bengaluru CEO Shri Rajesh Menon at my… pic.twitter.com/gzDxL9akUi
— DK Shivakumar (@DKShivakumar) March 30, 2026
ಸಭೆಯ ಆರಂಭದಲ್ಲಿ ಕೆಎಸ್‌ಸಿಎ ಪದಾಧಿಕಾರಿಗಳು ಒಬ್ಬ ಶಾಸಕನಿಗೆ ‘ಒನ್ ಪ್ಲಸ್ ಒನ್’ (2 ಟಿಕೆಟ್) ನೀಡಲು ಮುಂದಾಗಿದ್ದರು. ಆದರೆ ಶಾಸಕರ ಬೇಡಿಕೆ ಮತ್ತು ಒತ್ತಡವನ್ನು ಮನಗಂಡ ಡಿಸಿಎಂ, ಮತ್ತೊಂದು ಟಿಕೆಟ್ ಹೆಚ್ಚಿಸುವಂತೆ ಸೂಚಿಸಿದರು. ಸುದೀರ್ಘ ಚರ್ಚೆಯ ಬಳಿಕ ಅಂತಿಮವಾಗಿ ಪ್ರತಿ ಐಪಿಎಲ್ ಪಂದ್ಯಕ್ಕೂ ಮೂರು ಟಿಕೆಟ್ ನೀಡಲು ಒಪ್ಪಂದ ಮಾಡಿಕೊಳ್ಳಲಾಯಿತು.
ಸಭೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಐಪಿಎಲ್ ಪಂದ್ಯಗಳಿಗೆ 3 ಟಿಕೆಟ್ ನೀಡಲು ಸಂಸ್ಥೆಗಳು ಒಪ್ಪಿವೆ. ಆದರೆ ಅಂತರಾಷ್ಟ್ರೀಯ ಪಂದ್ಯಗಳಿದ್ದಾಗ ಮಾತ್ರ ಎರಡು ಟಿಕೆಟ್‌ಗಳನ್ನು ನೀಡಲಾಗುತ್ತದೆ. ಶಾಸಕರಿಗೆ ಇದಕ್ಕಿಂತ ಹೆಚ್ಚಿನ ಟಿಕೆಟ್ ಬೇಕಿದ್ದರೆ ಅವರು ಹಣ ನೀಡಿ ಖರೀದಿ ಮಾಡಬೇಕು ಅಥವಾ ಪ್ರತ್ಯೇಕವಾಗಿ ಮನವಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಕ್ರಿಕೆಟ್ ಕ್ರೇಜ್ ಮಿತಿ ಮೀರಿರುವುದರಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಕೆಎಸ್‌ಸಿಎ ಈಗಾಗಲೇ ಈ ಕುರಿತು ಒಂದು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಅದರ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವಂತೆ ಡಿಸಿಎಂ ಸೂಚನೆ ನೀಡಿದ್ದಾರೆ.
ಸಭೆಯ ವಿಶೇಷ ಆಕರ್ಷಣೆಯಾಗಿ ಆರ್‌ಸಿಬಿ ತಂಡದ ಸಿಇಒ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಆರ್‌ಸಿಬಿ ತಂಡದ ಅಧಿಕೃತ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಡಿಸಿಎಂ ಅವರು ಕೂಡಲೇ ಜರ್ಸಿ ಧರಿಸಿ ಫೋಟೋಗೆ ಪೋಸ್ ನೀಡುವ ಮೂಲಕ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಉಪಸ್ಥಿತರಿದ್ದರು.
