ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಇನ್‌ಫ್ಲೂಯೆನ್ಸರ್ ‘ಅಮುಕು ಡುಮುಕು’ ವಿರುದ್ಧ FIR

ಅಪಾಯ (10)

ಬೆಂಗಳೂರು: ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಸೋಷಿಯಲ್ ಮೀಡಿಯಾದಲ್ಲಿ ‘ಅಮುಕು ಡುಮುಕು’ ಎಂಬ ಹೆಸರಿನಿಂದ ಪರಿಚಿತರಾಗಿರುವ ಇನ್‌ಫ್ಲೂಯೆನ್ಸರ್ ಮಂಜು ಅಲಿಯಾಸ್ ಅಮುಕು ಡುಮುಕು ಎಫ್‌ಐಆರ್ ದಾಖಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ‘ಅಮುಕು ಡುಮುಕು’ ಎಂಬ ಹೆಸರಿನಿಂದ ಪರಿಚಿತರಾಗಿರುವ ಇನ್‌ಫ್ಲೂಯೆನ್ಸರ್ ಮಂಜು ಅಲಿಯಾಸ್ ಅಮುಕು ಡುಮುಕು ವಿರುದ್ಧ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರಿನ ಪ್ರಕಾರ, ಜುಲೈ 9ರ ರಾತ್ರಿ ಮಂಜು ಮತ್ತು ಅವರ ಸ್ನೇಹಿತರು ನಗರದ ಖಾಸಗಿ ರೆಸ್ಟೋ ಬಾರ್‌ಗೆ ಭೇಟಿ ನೀಡಿ ಊಟ ಹಾಗೂ ಮದ್ಯ ಸೇವಿಸಿದ್ದರು. ಬಳಿಕ ಬಿಲ್ ಪಾವತಿಸುವ ವೇಳೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಬಿಲ್ ಕೇಳಿದ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ಹಾಗೂ ಅವಮಾನಕಾರಿ ರೀತಿಯಲ್ಲಿ ವರ್ತಿಸಿದ್ದಾಗಿ ಆರೋಪಿಸಲಾಗಿದೆ.

ದೂರುದಾರರ ಹೇಳಿಕೆಯಂತೆ, ಬಾರ್‌ನಿಂದ ಹೊರಬರುತ್ತಿದ್ದ ಮಂಜು ಅವರನ್ನು ಮಹಿಳಾ ಸಿಬ್ಬಂದಿ ಪ್ರಶ್ನಿಸಿದಾಗ, ಅವರು ಕುಡಿದ ಮತ್ತಿನಲ್ಲಿ ಸೆಲ್ಫಿ ಕೇಳುವ ನೆಪದಲ್ಲಿ ಅಸಭ್ಯವಾಗಿ ಮಾತನಾಡಿದ್ದು ಮಾತ್ರವಲ್ಲದೆ, ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. “ನಿನ್ನ ರೇಟ್ ಎಷ್ಟು?” ಎಂಬ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.

ಇದಷ್ಟೇ ಅಲ್ಲದೆ, ಘಟನಾ ಸ್ಥಳದಲ್ಲಿದ್ದ ಬಾರ್ ಮ್ಯಾನೇಜರ್ ಮಧ್ಯಪ್ರವೇಶಿಸಿದ ವೇಳೆ ಅವರ ಮೇಲೂ ಹಲ್ಲೆ ನಡೆಸಲು ಯತ್ನಿಸಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಘಟನೆ ಬಳಿಕ ರೆಸ್ಟೋ ಬಾರ್ ಆಡಳಿತವು ಪೊಲೀಸ್ ಠಾಣೆಗೆ ದೂರು ಸಲ್ಲಿಸಿತ್ತು.

ದೂರಿನ ಆಧಾರದ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS)-2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆಯ ಮಾನಕ್ಕೆ ಧಕ್ಕೆ ತರುವುದು, ಅಸಭ್ಯ ವರ್ತನೆ, ಬೆದರಿಕೆ, ಹಲ್ಲೆಗೆ ಯತ್ನ ಸೇರಿದಂತೆ ಹಲವು ಆರೋಪಗಳನ್ನು ಸೇರಿಸಲಾಗಿದೆ.

ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ BNS 2023ರ ಸೆಕ್ಷನ್ 74, 75(1), 75(2), 75(3), 78, 79, 351(2), 352 ಹಾಗೂ 3(5) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣ ದಾಖಲಾದ ಬಳಿಕ ಮಂಜು ಅಲಿಯಾಸ್ ಅಮುಕು ಡುಮುಕು ಹಾಗೂ ಅವರೊಂದಿಗೆ ಇದ್ದ ಸ್ನೇಹಿತರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸಿಸಿಟಿವಿ ದೃಶ್ಯಗಳು, ರೆಸ್ಟೋ ಬಾರ್ ಸಿಬ್ಬಂದಿಯ ಹೇಳಿಕೆಗಳು ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Exit mobile version