3ನೇ ದಿನವೂ ಇಂಡಿಗೋ ವಿಮಾನಯಾನದಲ್ಲಿ ಗೊಂದಲ: ಬೆಂಗಳೂರಿನಲ್ಲಿ 73 ವಿಮಾನ ರದ್ದು

Untitled design 2025 12 04T120544.549

ಬೆಂಗಳೂರು/ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ (IndiGo) ವಿಮಾನಗಳ ಹಾರಾಟದಲ್ಲಿ ಉಂಟಾಗಿರುವ ಗಂಭೀರ ಅಡಚಣೆಯು ಸತತ ಮೂರನೇ ದಿನಕ್ಕೆ ಕಾಲಿಟ್ಟಿದೆ. ತಾಂತ್ರಿಕ ದೋಷಗಳು, ಸಿಬ್ಬಂದಿ ಕೊರತೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ದೇಶಾದ್ಯಂತ ವಿಮಾನಗಳ ಹಾರಾಟ ರದ್ದಾಗಿದ್ದು, ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ (ಎರಡನೇ ದಿನ) ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

ಇಂದಿಗೂ ಮುಂದುವರಿದ ರದ್ದತಿ: ದೇಶಾದ್ಯಂತ 100+ ವಿಮಾನಗಳ ಮೇಲೆ ಪರಿಣಾಮ

ಈ ಸಮಸ್ಯೆ ಮೂರನೇ ದಿನವೂ ಮುಂದುವರಿಯುವ ಸಾಧ್ಯತೆಗಳಿದ್ದು, ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ಇಂದು ಕೂಡ ರದ್ದಾಗುವ ಭೀತಿ ಎದುರಾಗಿದೆ. ಇನ್ನು ಹಲವು ವಿಮಾನಗಳ ಹಾರಾಟದಲ್ಲಿ ಗಣನೀಯ ವಿಳಂಬ ಕಂಡುಬರುತ್ತಿದ್ದು, ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರೀ ವ್ಯತ್ಯಯ

ರಾಜಧಾನಿ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport – KIA) ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.

ಇಂಡಿಗೋ ಪ್ರಯಾಣಿಕರು ತಮ್ಮ ಪ್ರವಾಸವನ್ನು ರದ್ದುಗೊಳಿಸುವುದು ಇಲ್ಲವೇ ಬೇರೆ ವಿಮಾನಯಾನ ಸಂಸ್ಥೆಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.

ಡಿಜಿಸಿಎಯಿಂದ ಇಂಡಿಗೋ ಅಧಿಕಾರಿಗಳಿಗೆ ಬುಲಾವ್

ಸತತ ವಿಮಾನಗಳ ರದ್ದತಿ ಮತ್ತು ವಿಳಂಬದಿಂದಾಗಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಇಂಡಿಗೋ ಸಂಸ್ಥೆಗೆ ನೋಟಿಸ್ ನೀಡಿದೆ.

48 ಗಂಟೆಗಳಲ್ಲಿ ಸುಧಾರಣೆಯ ಭರವಸೆ ನೀಡಿದ ಇಂಡಿಗೋ

ಸಂಸ್ಥೆಯಲ್ಲಿ ಉಂಟಾಗಿರುವ ಗೊಂದಲ ಮತ್ತು ಅಡಚಣೆಗಳ ಕುರಿತು ಇಂಡಿಗೋ ಸಂಸ್ಥೆಯು ಔಪಚಾರಿಕ ಪ್ರತಿಕ್ರಿಯೆ ನೀಡಿದೆ. ಸಂಸ್ಥೆಯು ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ಕ್ಷಮೆಯಾಚಿಸುತ್ತೇವೆ. ಸಮಸ್ಯೆಯನ್ನು ಬಗೆಹರಿಸಿ, ಮುಂದಿನ 48 ಗಂಟೆಗಳೊಳಗೆ ಪರಿಸ್ಥಿತಿಯನ್ನು ಸುಧಾರಿಸುತ್ತೇವೆ ಎಂದು ಭರವಸೆ ನೀಡಿದೆ.

ಇಂಡಿಗೋ ನೀಡಿದ ಕಾರಣಗಳು:

ಇಂಡಿಗೋ ಸಂಸ್ಥೆಯು ವಿಮಾನ ಹಾರಾಟದ ಅಡಚಣೆಗೆ ಹಲವು ಅನಿರೀಕ್ಷಿತ ಕಾರ್ಯಾಚರಣೆಗಳನ್ನ ತಿಳಿಸಿವೆ ಅವುಗಳೆಂದರೆ:

  1. ತಾಂತ್ರಿಕ ದೋಷಗಳು.

  2. ಚಳಿಗಾಲದ ವೇಳಾಪಟ್ಟಿಯಲ್ಲಿನ ಹೊಂದಾಣಿಕೆಗಳು

  3. ಹವಾಮಾನ ಪರಿಸ್ಥಿತಿ.

  4. ವಿಮಾನ ನಿಲ್ದಾಣಗಳಲ್ಲಿನ ದಟ್ಟಣೆ

  5. ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ ಹೊಸ ಅನುಷ್ಠಾನ

ಈ ಎಲ್ಲಾ ಕಾರಣಗಳಿಂದಾಗಿ ಸಿಬ್ಬಂದಿ ಲಭ್ಯತೆಗೆ ಅನುಗುಣವಾಗಿ ವಿಮಾನ ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ತಾತ್ಕಾಲಿಕವಾಗಿ ಕೆಲ ವಿಮಾನಗಳ ವೇಳಾಪಟ್ಟಿ ಬದಲಾವಣೆ ಮತ್ತು ರದ್ದತಿ ಅನಿವಾರ್ಯವಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

Exit mobile version