ನವದೆಹಲಿ: ಭಾರತದ ಹವಾಮಾನದಲ್ಲಿ ಅನಿರೀಕ್ಷಿತ ಮತ್ತು ಅಪಾಯಕಾರಿ ಬದಲಾವಣೆಗಳು ಕಂಡುಬರುತ್ತಿವೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ದೇಶದ ಸುಮಾರು 17 ರಾಜ್ಯಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಹಾಗೂ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳು ಹವಾಮಾನ ಅತ್ಯಂತ ಕಠಿಣವಾಗಿದ್ದು , ಸಾರ್ವಜನಿಕರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.
ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯಲ್ಲಿ ಹವಾಮಾನ ಸಂಪೂರ್ಣವಾಗಿ ಬದಲಾಗಿದೆ. ಮಾರ್ಚ್ 22 ರಂದು ದೆಹಲಿಯ ಲಕ್ಷ್ಮಿ ನಗರ, ಐಟಿಒ, ಇಂಡಿಯಾ ಗೇಟ್ ಮತ್ತು ಮಯೂರ್ ವಿಹಾರ್ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ತಾಪಮಾನ ಕುಸಿಯುವುದರಿಂದ ಜನರಿಗೆ ಬಿಸಿಲಿನಿಂದ ತಾತ್ಕಾಲಿಕ ಪರಿಹಾರ ಸಿಗಲಿದೆ.
ಉತ್ತರ ಪ್ರದೇಶದ ಪೂರ್ವ ಭಾಗಗಳಲ್ಲಿ ಪರಿಸ್ಥಿತಿ ತೀವ್ರವಾಗಿರಲಿದೆ. ಗೋರಖ್‌ಪುರ, ಅಜಮ್‌ಗಢ, ಬಲ್ಲಿಯಾ ಮತ್ತು ಸಿದ್ಧಾರ್ಥನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಬಿಹಾರದ ಪಾಟ್ನಾ, ಮುಜಫರ್‌ಪುರ ಮತ್ತು ಭಾಗಲ್ಪುರ ಜಿಲ್ಲೆಗಳಲ್ಲಿ ಮಿಂಚಿನ ಸಹಿತ ಮಳೆಯಾಗುವ ಸಾಧ್ಯತೆ ಇದ್ದು ಜನರು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ.
ಹಿಮಾಚಲ ಪ್ರದೇಶದ ಚಂಬಾ, ಕುಲ್ಲು ಮತ್ತು ಲಹೌಲ್-ಸ್ಪಿಟಿಯಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರಾಖಂಡದ ಚಮೋಲಿ ಮತ್ತು ರುದ್ರಪ್ರಯಾಗ್ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸುವ ಮತ್ತು ರಸ್ತೆಗಳು ಮುಚ್ಚಿಹೋಗುವ ಅಪಾಯವಿದೆ. ಎತ್ತರದ ಪ್ರದೇಶಗಳಲ್ಲಿ ತಾಪಮಾನವು ಶೂನ್ಯಕ್ಕಿಂತ ಕೆಳಕ್ಕೆ ಇಳಿದಿದೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಕಳೆದ 72 ಗಂಟೆಗಳಿಂದ ಹವಾಮಾನ ಏರುಪೇರಾಗಿದೆ. ಗೋಧಿ ಬೆಳೆ ಕಟಾವಿಗೆ ಸಿದ್ಧವಾಗಿರುವ ಈ ಸಮಯದಲ್ಲಿ ಆಲಿಕಲ್ಲು ಮಳೆ ಬೀಳುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಮಂಜು ಕವಿದ ವಾತಾವರಣದಿಂದಾಗಿ ರಸ್ತೆ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ರಾಜಸ್ಥಾನದ ಜೈಪುರ ಮತ್ತು ಜೈಸಲ್ಮೇರ್ ಭಾಗಗಳಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿಯೂ ಹವಾಮಾನ ಸ್ಥಿರವಾಗಿಲ್ಲ. ಕೆಲವು ಕಡೆಗಳಲ್ಲಿ ಬೇಸಿಗೆ ದಗೆ ಮುಂದುವರೆದಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಮಿಶ್ರ ಹವಾಮಾನವು ಜನರಲ್ಲಿ ಅನಾರೋಗ್ಯ ಉಂಟುಮಾಡುವ ಸಾಧ್ಯತೆ ಇದ್ದು, ಸಾರ್ವಜನಿಕರು ಜಾಗರೂಕರಾಗಿರಬೇಂಕೆಂದು ಹವಾಮಾನ ಇಲಾಖೆ ಎಚ್ಚರಿಸಿದೆ.
