ಚಿಕ್ಕಮಗಳೂರು: ಪ್ರೀತಿ ಎಂದರೆ ಅದು ದೇಶ, ಭಾಷೆ, ಸಂಸ್ಕೃತಿ, ಗಡಿ ಎಲ್ಲವನ್ನೂ ಮೀರಿದ ಶಕ್ತಿ ಎಂಬುದಕ್ಕೆ ಚಿಕ್ಕಮಗಳೂರಿನಲ್ಲಿ ನಡೆದ ಈ ಮದುವೆ ಜೀವಂತ ಸಾಕ್ಷಿಯಾಗಿದೆ. ಕಾಫಿನಾಡಿನ ಹಸಿರು ಬೆಟ್ಟಗಳ ನಡುವೆ, ಭಾರತ–ಚೀನಾ ಸಂಸ್ಕೃತಿಗಳ ಸಂಗಮದಲ್ಲಿ ಅರಳಿದ ಈ ಪ್ರೇಮಕಥೆ ಈಗ ಎಲ್ಲರ ಮನ ಸೆಳೆಯುತ್ತಿದೆ.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಪ್ರದೇಶದ ಯುವಕ ರೂಪಕ್, ಚೀನಾ ಮೂಲದ ಯುವತಿ ಜೇಡ್ (Jade) ಅವರನ್ನು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಸಂಭ್ರಮ, ಸಂಸ್ಕೃತಿ ಮತ್ತು ಸಂಪ್ರದಾಯಗಳೊಂದಿಗೆ ನಡೆದ ಈ ವಿವಾಹವು ಗಮನ ಸೆಳೆದಿದೆ.
ಆಸ್ಟ್ರೇಲಿಯಾದಲ್ಲಿ ಈ ಪ್ರೇಮಕಥೆಯ ಆರಂಭವಾಗಿದೆ. ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ರೂಪಕ್ ಮತ್ತು ಜೇಡ್ ಅಲ್ಲಿ ಭೇಟಿಯಾಗಿದ್ದರು. ಒಟ್ಟಿಗೆ ಅಧ್ಯಯನ ಮಾಡುವ ವೇಳೆ ಸ್ನೇಹದಿಂದ ಆರಂಭವಾದ ಅವರ ಸಂಬಂಧ ಕ್ರಮೇಣ ಪ್ರೀತಿಗೆ ತಿರುಗಿತ್ತು. ವಿಭಿನ್ನ ದೇಶ, ವಿಭಿನ್ನ ಭಾಷೆ, ವಿಭಿನ್ನ ಸಂಸ್ಕೃತಿಯ ನಡುವೆಯೂ ಅವರ ಮನಸ್ಸುಗಳು ಒಂದಾಗಿ ಬೆಸೆಯುತ್ತಾ ಬಂದವು. ಪರಸ್ಪರ ಇಬ್ಬರೂ ಅರಿತುಕೊಂಡು ಜೀವನ ಸಂಗಾತಿಗಳಾಗಲು ನಿರ್ಧರಿಸಿದರು.
ಈ ಸಂಬಂಧದ ಕುರಿತು ಇಬ್ಬರೂ ತಮ್ಮ ಕುಟುಂಬಸ್ಥರಿಗೆ ತಿಳಿಸಿದಾಗ, ಮೊದಲಿಗೆ ಸ್ವಲ್ಪ ಅಚ್ಚರಿಯಾದರೂ, ನಂತರ ಇಬ್ಬರ ಪ್ರೀತಿಗೆ ಗೌರವ ನೀಡಿ, ಕುಟುಂಬಸ್ಥರು ಸಂಪೂರ್ಣ ಬೆಂಬಲ ನೀಡಿದರು. ಚೀನಾದಿಂದ ಜೇಡ್ ಅವರ ತಂದೆ-ತಾಯಿಯೇ ಸ್ವತಃ ಭಾರತಕ್ಕೆ ಬಂದು, ಕಾಫಿನಾಡದ ಸಂಪ್ರದಾಯದಂತೆ ತಮ್ಮ ಮಗಳನ್ನು ರೂಪಕ್‌ಗೆ ಧಾರೆ ಎರೆಯುವ ಮೂಲಕ ಮದುವೆ ನೆರವೇರಿಸಿದರು.
ಮದುವೆ ಕಾರ್ಯಕ್ರಮದಲ್ಲಿ ಭಾರತೀಯ ಸಂಪ್ರದಾಯಗಳ ಜೊತೆಗೆ ಚೀನಾದ ಸಂಸ್ಕೃತಿಯ ಅಂಶಗಳನ್ನೂ ಒಳಗೊಂಡಂತೆ ಆಚರಣೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಜೇಡ್, “ಭಾರತ ಮತ್ತು ಚೀನಾದ ಸಂಸ್ಕೃತಿಗಳು ತುಂಬಾ ಹತ್ತಿರವಾಗಿವೆ. ಇಲ್ಲಿ ನನಗೆ ಮನೆತನದ ಆತ್ಮೀಯತೆ ಸಿಕ್ಕಿದೆ. ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ನನ್ನ ಮನಸ್ಸು ಕದ್ದಿದೆ,” ಎಂದು ಸಂತಸ ವ್ಯಕ್ತಪಡಿಸಿದರು.
ರೂಪಕ್ ಮಾತನಾಡಿ, “ಪ್ರೀತಿಗೆ ಭಾಷೆ, ದೇಶ ಎನ್ನುವ ಮಿತಿಗಳು ಇಲ್ಲ. ನಮ್ಮ ಕುಟುಂಬಸ್ಥರ ಬೆಂಬಲದಿಂದ ಈ ಸುಂದರ ಕ್ಷಣ ಸಾಧ್ಯವಾಯಿತು. ಜೇಡ್ ನಮ್ಮ ಮನೆಗೆ ಮಗಳಂತೆ ಬಂದಿದ್ದಾಳೆ,” ಎಂದರು.
ಮದುವೆ ಸಂಭ್ರಮದಲ್ಲಿ ಸ್ನೇಹಿತರು, ಬಂಧುಗಳು, ಸ್ಥಳೀಯ ಗಣ್ಯರು ಭಾಗವಹಿಸಿದ್ದರು. ಚೀನಾದಿಂದ ಬಂದಿದ್ದ ಅತಿಥಿಗಳು ಕಾಫಿನಾಡಿನ ಸಂಸ್ಕೃತಿ, ಊಟ, ಆತಿಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಚಿಕ್ಕಮಗಳೂರಿನ ಹಸಿರು ಬೆಟ್ಟಗಳು, ತೋಟಗಳು, ಕಾಫಿ ಎಸ್ಟೇಟ್‌ಗಳು ಮತ್ತು ಹವಾಮಾನ, ಜೇಡ್ ಅವರನ್ನು ಸಂಪೂರ್ಣವಾಗಿ ಮಂತ್ರಮುಗ್ಧಗೊಳಿಸಿದೆ.
